ಹೆಣ್ಣೆಂದರೆ...?!

ಮನುಷ್ಯನೆಂದಮೇಲೆ ವಿವೇಕ, ವಿಚಾರ, ವಿವೇಚನೆ ಅನುಭವ ಎಲ್ಲದರಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದು. ಓರ್ವನಿಗೆ ಸರಿ ಎನಿಸಿದ ವಿಷಯ ಉಳಿದೆಲ್ಲರಿಗೂ ಒಪ್ಪಿಗೆ ಆಗಬೇಕೆಂತೇನಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಒಂದು ದೃಷ್ಟಿಕೋನವಿರುತ್ತದೆ, ಅದರ ಅನುಸಾರ, ಆತ ಜಗತ್ತನ್ನು ನೋಡುವ ಪರಿ ಉಳಿದೆಲ್ಲರಿಗಿಂತ ಭಿನ್ನವಾಗಬಹುದು. 

ಅಜ್ಜಿ ಮನೆಗೆಂದು ಹಳ್ಳಿಗೆ ಬಂದಾಗ, ಹೆಚ್ಚು ಕಮ್ಮಿ ಅಮ್ಮನ ವಯಸ್ಕಳಾದ ಗೌರಿಯನ್ನು ಕಂಡೆ. ಅಮ್ಮನೊಂದಿಗೆ ಶಾಲೆ ಕಲಿತವಳು ಆಕೆ, ನೆರೆಮನೆಯವಳೇ. ಸುಮಾರು ೪೬-೪೮ ವಯಸ್ಸು. ಗದ್ದೆ, ಕೊಟ್ಟಿಗೆಗಳಲ್ಲಿ ದುಡಿದವಳು. ಗಟ್ಟಿಗಿತ್ತಿ. ಚಿಕ್ಕಂದಿನಿಂದಲೂ ಪರಿಚಯವಿದ್ದರಿಂದ, ಸಲುಗೆಯಿತ್ತು. ನನ್ನನ್ನು ಕಂಡವಳೇ ಓಡಿ ಬಂದು ತನ್ನ ಮನೆಯತ್ತ ಕರೆದೊಯ್ದಳು. ಕೆಲಕಾಲ ಆಕೆಯೊಂದಿಗೆ ಮಾತನಾಡುತ್ತಾ, ಹಾಗೆಯೆ ಕೇಳಿದೆ, "ನಿನ್ನ ಪ್ರಕಾರ ಈಗಿನ ಕಾಲದ ಹೆಣ್ಣು ಮಕ್ಕಳು ಹೇಗಿರಬೇಕು, ಯಾವ ನಿಲುವನ್ನು ಹೊಂದಿರಬೇಕು?" ಆಕೆಗೆ ಆ ಪ್ರಶ್ನೆಯನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಬಳಿಕ ಉತ್ತರ ಕೊಡುವ ಬಗೆಯಲ್ಲಿ ಆಕೆ ಮಾತನ್ನು ಶುರು ಮಾಡಿಕೊಂಡಳು. "ಹೆಣ್ಣು ಅಂದ್ಮೇಲೆ ಒಳ್ಳೆ ಗುಣವಂತೂ ಇರ್ಲೇಬೇಕು. ಮನೆಗೆಲಸದಲ್ಲೆಲ್ಲಾ ಚುರುಕಾಗಿ ವ್ಯವಹರಿಸಬೇಕು. ಚಿಕ್ಕಂದಿನಿಂದ ಒಂದು ಚೌಕಟ್ಟಿನಲ್ಲಿ ಬೆಳೆಯಬೇಕು. ನೀನ್ ಕೇಳಬಹುದು, ಆ ಚೌಕಟ್ಟು ಹೇಗಿರಬೇಕೆಂದು? 
"ನೋಡು, ಮನೆಯಲ್ಲಿ ಹೆಣ್ಣೊಂದು ಹುಟ್ಟಿತೆಂದರೆ ಅದರ ಭವಿಷ್ಯ ಅಲ್ಲಿಯೇ ನಿರ್ಧರಿತವಾಗಿಬಿಡುತ್ತದೆ, ಮುಂದೊಂದು ದಿನ, ಈಕೆ ಮದುವೆ ಆಗಿ ಬೇರೊಂದು ಮನೆ ಸೇರುವವಳು, ಮದುವೆ ಮಾಡಿಕೊಡುವವರೆಗೆ ಮಾತ್ರ ಈಕೆಯ ಜವಾಬ್ದಾರಿ ನಮ್ಮದು ಎಂಬುದು ಮನೆಯವರ ಪಾಲಿಗೆ ಶಾಸನ. ಮೊದಲೆಲ್ಲಾ, ಹೆಣ್ಣು ಹುಟ್ಟಿದಾಗಲೆಲ್ಲ, ತಂದೆಯಾದವನಿಗೆ ಕೆಟ್ಟ ಕೋಪ ಬಂದುಬಿಡುತ್ತಿತ್ತು. ಆಸ್ಪತ್ರೆಯಲ್ಲೇ ಕೂಗಾಡಿಬಿಡುತ್ತಿದ್ದ ಭೂಪ...! ಏನೇ ಆಗಲಿ, ಈಗೆಲ್ಲಾ ಬದಲಾಗಿದೆ, ಅಂತಹ ಕೆಟ್ಟ ಅಪ್ಪಂದಿರು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಈ ಮಾನಸಿಕತೆ ನಮ್ಮಲ್ಲಿ ಬದಲಾದದ್ದು ನೋಡು!  ಆದರೇನು ಬಂತು, ಪ್ರಾರಬ್ಧ ಅದೇ ಅಲ್ಲವೇ, ಎಷ್ಟoದರು ಗಂಡನ ಸ್ವತ್ತು ಎಂದೇ ನಮಗೆ ನಾಮಧೇಯ! ಇಷ್ಟು ಸಮಾಜದಲ್ಲಿನ ಸ್ಥಿತಿ...
"ಇನ್ನು ಕೆಲಸದ ಬಗ್ಗೆ ಹೇಳೋದಾದ್ರೆ, ಹೆಣ್ಣು ಅಡುಗೆ ಅಂತೂ ಕಲಿಲೇಬೇಕು, ಗುಡಿಸೋದು, ಒರಸೋದು, ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು ಇವೆಲ್ಲ ಮಾಮೂಲು ನೋಡು, ನಿನಗೂ ಗೊತ್ತು. ಅಷ್ಟಲ್ಲದೆ, ಇನ್ನೂ ಸಣ್ಣ ಪುಟ್ಟದಾದ ಎಲ್ಲಾ ಕೆಲಸಾನು ಇವೆಯಲ್ಲವೇ, ನಾವಲ್ದೆ ಇನ್ಯಾರು ಮಾಡ್ತಾರೆ? ಕೆಲ್ಸಾ ಮಾಡಿ ಸುಮ್ನೆ ಕೂತ್ರೆ ನಡೀತದಾ? ಇಲ್ಲಪ್ಪ! ಮನೆ ಮಂದಿ ಜೊತೆ ನಾಲ್ಕು ಒಳ್ಳೆ ಮಾತ್ ಆಡಬೇಕಲ್ವೇನು? 
"ಏನೇ ಅಂದರೂ ಇವೆಲ್ಲಾ ಹಿಂದಿನಿಂದ ನಡೆದು ಬಂದ ಸಂಪ್ರದಾಯವಲ್ಲವೇ, ನಾವಲ್ಲದೆ ಇನ್ಯಾರು ಮುಂದುವರಿಸುವರು? ಒಂದ್ ಲೆಕ್ಕದಲ್ಲಿ, ಹಿಂದಿನವರು ಸರಿಯಾಗಿಯೇ ಮಾಡಿದ್ದಾರೆ. ಮದುವೆ ಆದ ಮೇಲೆ ಗಂಡನ ಸೇವೆ ಮಾಡುವುದೇ ಒಳಿತಲ್ಲವೇ? ನಮಗೇಕೆ ಬೇಕು ಸಮಾಜದಲ್ಲಿನ ಪ್ರತಿಷ್ಠೆ, ಅದಕ್ಕೆoದೇ ಗಂಡಸರಿದ್ದಾರಲ್ಲವೇ? ಅವರ ಮಾಡದಿಯರಾಗಿ, ಅವರ ಹಿಂದೆ ನಿಂತು ಸಾಗುವುದೇ ಲೇಸಲ್ಲವೇ ನಮಗೆ? ಇತ್ತೀಚಿನವರಿಗೆ ಬುದ್ಧಿಯಿಲ್ಲ ನೋಡು! ಇರುವುದರಲ್ಲೇ ತೃಪ್ತಿಪಡುವುದ ಬಿಟ್ಟು, 'ನಾವು, ನಾವು' ಎಂದು ಕೂಗುತ್ತಾ ಬೀದಿಯಲ್ಲೆಲ್ಲಾ ಅಲೆದಾಡುತ್ತಾರಲ್ಲ ಈಗಿನ ಹೆಣ್ಣು ಮಕ್ಕಳು, ಅವರಿಗೇನು ಬೇರೆ ಕೆಲಸ ಇಲ್ಲವಾ? ಮನೇಲಿ ಕೂತು, ಅಡುಗೆಯೋ, ಸಂಸಾರವೋ ನೋಡಿಕೊಳ್ಳೋದನ್ನ ಬಿಟ್ಟು, ಹೊರಗಡೆ ಅದೇನೋ 'ಆಫಿಸ್ಗೆ' ಹೋಗ್ತಾರಂತೆ! ಇವರೂ ಹೊರಗಡೆ ದುಡಿಯಲು ಶುರು ಮಾಡಿದರೆ, ಮನೆಕೆಲಸ ಯಾರು, ಗಂಡಸರು ಮಾಡುವರೆ...?

ನನಗೆ ನನ್ನ ಉತ್ತರ ಸಿಕ್ಕಂತಾಯಿತು, ಇನ್ನು ಕೆದಕುವುದು ಸರಿ ಕಾಣಲಿಲ್ಲ. ಆಕೆ ಕೊಟ್ಟ ಕಷಾಯ ಕುಡಿದು, ಹೋಗಿ ಬರುವುದಾಗಿ ಹೇಳಿ, ಅಲ್ಲಿಂದ ಹೊರಟೆ. ದಾರಿಯುದ್ದಕ್ಕೂ ಗೌರಿ ಆಡಿದ ಮಾತುಗಳೇ ನೆನಪಾಗುತ್ತಿದ್ದವು, ಓರ್ವ ಸ್ತ್ರೀ ತನ್ನದೇ ಸ್ತ್ರೀಕುಲದ ಬಗ್ಗೆ ಇಷ್ಟು ತಾತ್ಸಾರವಾಗಿ ಮಾತನಾಡಬಹುದೇ, ಒಂದು ಕ್ಷಣ ಆಶ್ಚರ್ಯವಾಯಿತು. ಅವಳ ಪ್ರಕಾರ, ಹೆಣ್ಣಿಗೆ ಮನೆಯ ನಾಲ್ಕು ಗೋಡೆಗಳ ಒಳಗಷ್ಟೇ ಪ್ರಪಂಚ, ಪುರುಷರೇ ಶ್ರೇಷ್ಠ! ಇರಲಿ, ಆಕೆ ಹಳ್ಳಿಯವಳಲ್ಲವೇ, ಹೊರಜಗತ್ತಿನ ಬಗ್ಗೆ ಕಲ್ಪನೆಯಿಲ್ಲ ಎಂದುಕೊಂಡೆ.

ಮೂರು ದಿನಗಳ ನಂತರ, ನಗರ ಪ್ರದೇಶದಲ್ಲಿ ನೆಲೆಸಿರುವ, ಕಲೆಕ್ಟರ್ ಸ್ನೇಹಾ ಅವರ ಮನೆಗೆ ಹೋಗಬೇಕಾಗಿ ಬಂತು. ಮೊದಲಿಂದಲೂ ಅವರ ಪರಿಚಯವಿತ್ತು, ತೀರಾ ಗೆಳೆತನವಿರಲಿಲ್ಲ. ಒಂದೇ ಶಾಲೆಯಲ್ಲೇ ಓದಿದ್ದು, ಆಕೆ ನನ್ನ ಸೀನಿಯರ್, ವೃತ್ತಿಯಲ್ಲಿಯೂ ಮೇಲ್ದರ್ಜೆ! ಸರಿ ಸುಮಾರು ೩೦-೩೨ ವಯಸ್ಸು ಇರಬಹುದಷ್ಟೇ. ಕಛೇರಿ ವಿಷಯ ಮುಗಿದ ಮೇಲೆ, ಕೆಲಹೊತ್ತು ಹರಟೆ ಹೊಡೆಯುತ್ತಾ ಕೂತೆವು. ಇದ್ದಕ್ಕಿದ್ದಂತೆ ಗೌರಿಯ ಮಾತುಗಳು ನೆನಪಾದವು. ಸ್ನೇಹಾ ಆ ವಿಷಯದ ಬಗ್ಗೆ ಯಾವ ನಿಲುವು ಹೊಂದಿರಬಹುದು ಎಂಬ ಕುತೂಹಲ ಹೆಚ್ಚಾಯಿತು, ಮತ್ತದೇ ಪ್ರಶ್ನೆ ಕೇಳಿಯೇಬಿಟ್ಟೆ: "ನಿಮ್ಮ ಪ್ರಕಾರ ಈಗಿನ ಕಾಲದ ಹೆಣ್ಣು ಮಕ್ಕಳು ಹೇಗಿರಬೇಕು, ಯಾವ ನಿಲುವನ್ನು ಹೊಂದಿರಬೇಕು?" 
ಆಕೆಯು, "ಒಳ್ಳೆಯ ಪ್ರಶ್ನೆ. ನನ್ನ ಅಭಿಪ್ರಾಯ ಹೇಳುವುದಾದರೆ, ಹೆಣ್ಣು ಮಕ್ಕಳು ಮುಖ್ಯವಾಗಿ 'ಇಂಡಿಪೆಂಡೆಟ್' ಆಗಿರಬೇಕು, ಎಲ್ಲಾ ವಿಷಯದಲ್ಲೂ. ತನ್ನ ಜೀವನದ ಪ್ರಮುಖ ನಿರ್ಧಾರಗಳನ್ನು ಮಾಡುವಲ್ಲಿ, ತನಗೆ ಇಷ್ಟಬಂದ ಕಡೆ ಓಡಾಡುವುದರಲ್ಲಿ, ತನ್ನ ಕಾಳಜಿ ತಾನೇ ವಹಿಸಿಕೊಳ್ಳಬೇಕು. ಕಷ್ಟ ಬಂದಾಗ ಇವರು ಬರುತ್ತಾರೆ, ಅವರು ಬರುತ್ತಾರೆ ಎನ್ನುತ್ತಾ ಕೂರದೆ, ತನ್ನ ಕಷ್ಟಕ್ಕೆ ತನಗೆ ತಾನೇ ಜೊತೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ದಿನಬೆಳಗಾದರೆ ಪತ್ರಿಕೆಗಳ ಮುಖಪುಟಗಳಲ್ಲಿ ಅತ್ಯಾಚಾರ, ಶೋಷಣೆಗಳ ವರದಿಗಳೇ ಹೆಚ್ಚು, ಓದಲಿಕ್ಕೂ ಅಸಹ್ಯ. ಇಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆಯೇ ಎಂಬ ಕೊರಗು!
"ಇವೆಲ್ಲ ಒಂದು ಮಾನಸಿಕತೆಯ ಪರಿಣಾಮಗಳೇ ಎನ್ನಬಹುದು. ತಲೆಮಾರುಗಳಿಂದ ಪುರುಷರ ಆಳ್ವಿಕೆ ನಡೆಯುತ್ತಿದೆಯಲ್ಲವೇ! ಒಮ್ಮೆಲೆ ಮಹಿಳೆಯರು ತಾವೂ ನಿಮಗೆ ಸಮನಾಗಿದ್ದೇವೆ ಎಂಬಂತೆ ಮುಂದೆ ಬಂದರೆ, ಪಾಪ ಅವರಿಗೆ ಸಹಿಸಲಾಗುತ್ತಿಲ್ಲವೇನೋ? ತಮಾಷೆಗೆ ಹೇಳಿದೆ...!
"ನನ್ನ ಜೀವನದ ಒಂದು ಸಂಗತಿ ನೀನು ಕೇಳಲೇ ಬೇಕು.  ಮನೇಲಿ ನಾವಿಬ್ಬರು ಮಕ್ಕಳು, ನಾನು ಮತ್ತು ಅಣ್ಣ. ತಂದೆ ತಾಯಿ ಇಬ್ಬರೂ ವೃತ್ತಿಯಿಂದ ಶಿಕ್ಷಕರು, ಬಹುಶಃ ಅದೇ ಕಾರಣವೆನಿಸುತ್ತದೆ ನಾನು ಅಣ್ಣ ಇಬ್ಬರೂ ಸುಸಂಸ್ಕೃತರಾಗಿ ಬೆಳೆಯಲು. ನನ್ನ ತಂದೆಗೆ ನಾನೆಂದರೆ ಬಹು ಪ್ರೀತಿ, ನನ್ನ ಎಲ್ಲಾ ಆಸೆಗಳನ್ನೂ ಚಟ್ ಎನ್ನುವಷ್ಟರಲ್ಲಿ ಈಡೇರಿಸುತ್ತಿದ್ದರು. ಅಣ್ಣನೊಂದಿಗೆ ಸ್ವಲ್ಪ ಗರಂ ಆಗಿಯೇ ಇರುತ್ತಿದ್ದರು, ಅಣ್ಣನಿಗೆ ಇದರಿಂದ ಕೆಲವೊಮ್ಮೆ ಸಿಟ್ಟು ಬರುತ್ತಿತ್ತು! ಹೀಗೊಮ್ಮೆ ಕಾರಣ ಕೇಳಿದಾಗ ಅಪ್ಪ ಹೇಳಿದ್ದು, ಗಂಡು ಮಕ್ಕಳಿಗೆ ಹೆಚ್ಚು ಸಲುಗೆ ಕೊಡಬಾರದು, ತಲೆ ಮೇಲೆಯೇ ಕುಳಿತುಬಿಡುತ್ತಾರೆ, ನನ್ನ ಮಕ್ಕಳು ಬೇರೆಯವರ ಹಾಗೆ ಬೇಜವಾಬ್ದಾರರಾಗಬಾರದು ಎಂಬ ನಿಟ್ಟಿನಿಂದ ಮಾತ್ರ ಹಾಗೆ ವರ್ತಿಸುತ್ತಿದ್ದೆ, ನನಗೆ ನೀವಿಬ್ಬರೂ ಸಮಾನರು, ಎಂದು. ನಮ್ಮ ಮನೆಯ ವಾತಾವರಣ ಹೇಗಿತ್ತು ಎನ್ನುವುದರ ಬಗ್ಗೆ ತಿಳಿಸಲು ಇದನ್ನೆಲ್ಲಾ ಹೇಳಿದೆಯಷ್ಟೇ...
"ಹಾಗೆಯೇ ಬೆಳೆದ ನಾವಿಬ್ಬರೂ ಪ್ರತಿಷ್ಠಿತ ಹುದ್ದೆಗೇರಿದೆವು, ಅಣ್ಣನ ಸ್ವಂತ ಕಂಪನಿಗಳಿವೆ, ನಾನು ಈಗ ಓರ್ವ 'ಸಿವಿಲ್ ಸರ್ವoಟ್'. ಅಣ್ಣನ ಮದುವೆಗೂ ಮುನ್ನ, ನನ್ನನ್ನು ಮದುವೆ ಮಾಡಲು ಮನೆಯಲ್ಲಿ ನಿರ್ಧರಿಸಿದರು. ನನಗೆ ಅದರಲೆಲ್ಲ ಆಸಕ್ತಿಯಿಲ್ಲದಿದ್ದರೂ, ತಂದೆ ತಾಯಿಯ ಸಂತೋಷಕ್ಕಾಗಿ ಒಪ್ಪಬೇಕಾಯಿತು. ಬಹಳ ಹುಡುಕಾಟದ ಮೇಲೆ, ಓರ್ವ 'ಸದ್ಗುಣ ಸಂಪನ್ನ'ನನ್ನು ಆರಿಸಲಾಯಿತು. ಮದುವೆಯ ಮಾತುಕತೆಯೆಲ್ಲಾ ಮುಗಿದು, ಆಮಂತ್ರಣ ಪತ್ರಿಕೆಯನ್ನೂ ಹಂಚಿಯಾಯಿತು. ಕೊನೆಯ ಕ್ಷಣದಲ್ಲಿ, ಆ ಹುಡುಗ ಮತ್ತವನ ಮನೆಯವರು ಸೇರಿ "ಮದುವೆಯಾದ ಮೇಲೆ ನೀನು ಕಲೆಕ್ಟರ್ ಆಗಿ ಮುಂದುವರಿಯುವುದು ಬೇಡ. ನಮ್ಮ ಮಗ 'ಕ್ಲರ್ಕ್' ಆಗಿ ಕೆಲಸ ಮಾಡುತ್ತಿರುವಾಗ 'ಅವನ ಹೆಂಡತಿ ಡಿಸಿಯಂತೆ' ಎಂದು ಜನ ಗೇಲಿ ಮಾಡುವುದಿಲ್ಲವೇ? ಮತ್ತೆ ವರದಕ್ಷಿಣೆ ಎಲ್ಲಾ ಇವೆಯಲ್ಲವೇ?" ಎಂಬೆಲ್ಲಾ ಮಾತುಗಳಿಂದ ತಮ್ಮ ನಿಜವಾದ ಸ್ವರೂಪ ಬಿಚ್ಚಿಯೇ ಬಿಟ್ಟರು! ಅಪ್ಪ, ಅಣ್ಣ ಇಬ್ಬರೂ ದಂಗಾಗಿ ಹೋದರು, ಅಮ್ಮ ಅಂತೂ ಅಳಲು ಶುರು ಮಾಡಿ ಬಿಟ್ಟರು. ಇವೆಲ್ಲ ನೋಡಿ ನನಗೆ ಕೆಟ್ಟ ಕೋಪ ಬಂತು, "ನೀವಿಲ್ಲಿಂದ ಹೊರಡುತ್ತಿರೋ ಅಥವಾ ನಿಮ್ಮ ಮಾತಿನ ಪರಿಣಾಮ ನೋಡುತ್ತೀರೋ?" ಎಂದೇಬಿಟ್ಟೆ! ಇದೇ ಕೊನೆ, ಇನ್ನೆಂದೂ ನನ್ನ ಮದುವೆಯ ಬಗ್ಗೆ ಮಾತನಾಡುವುದೇ ಬೇಡ ಎಂದು ಖಚಿತವಾಗಿ ಮನೆಯಲ್ಲಿ ಹೇಳಿದೆ, ಒಪ್ಪಿದರು. ಮುಂದೆ ಎಲ್ಲಾ ಒಳ್ಳೆಯದೇ ಆಗಿದೆ, ಅಣ್ಣನದೂ ಮದುವೆಯಾಗಿ ೭ ವರ್ಷಗಳೇ ಆಗಿವೆ. ಒಂದು ಒಳ್ಳೆಯ ನಿರ್ಧಾರ ಮಾಡಿರುವ ತೃಪ್ತಿ ನನಗಿದೆ. ಮದುವೆಯಿಂದ ಆಗಬಹುದಾದ ಮಾನಸಿಕ ಹಿಂಸೆಯಿಂದ ಪಾರಾದೆನೆಂಬ ನೆಮ್ಮದಿಯಿದೆ. ಅಲ್ಲದೆ, ಒಂದು ಹೆಣ್ಣು, ಒಂದು ಗಂಡು ಮಕ್ಕಳನ್ನು ದತ್ತು ಪಡೆದಿದ್ದೇನೆ. ಅವರಿಬ್ಬರ ಆಟ-ಪಾಠಗಳನ್ನು ನೋಡುತ್ತಿದ್ದರೆ, ನನ್ನ ಹಾಗೂ ಅಣ್ಣನ ಬಾಲ್ಯ ನೆನಪಾಗುತ್ತದೆ. ಒಂದು ಸಮೃದ್ಧ ಬಾಳು ಈಗ ನನ್ನದಾಗಿದೆ ನೋಡು. 
"ಹೆಣ್ಣು ಮಕ್ಕಳು ಸಮಾಜಕ್ಕೆ ಅಂಜಿ, ಬಂದಿದ್ದೆಲ್ಲಾ ಪ್ರಾರಬ್ಧ ಎಂದು ಸ್ವೀಕರಿಸೋ ಬದಲು ತಮ್ಮ ಗೌರವಕ್ಕೆ ಧಕ್ಕೆ ತರುವಂತಹ ಎಲ್ಲದಕ್ಕೂ ಪ್ರತಿರೋಧವೊಡ್ಡಬೇಕು. ನಮಗೆ ಇಷ್ಟವಾಗದ್ದನ್ನು ತಿರಸ್ಕರಿಸುವ ಎಲ್ಲಾ ಹಕ್ಕು ನಮಗಿದೆ. ನಮ್ಮಷ್ಟಕ್ಕೆ ನಾವು, ಒಳ್ಳೆಯ ಗುಣಗಳನ್ನು ಒಳಗೊಂಡು ಜೀವನ ನಡೆಸಲು ಏನು ಕೊರತೆಯಿದೆ? ಅಂದ ಹಾಗೆ, ನಮ್ಮ ಬದುಕು ನಮ್ಮ ನಿರ್ಣಯಗಳಿಗಾನುಸಾರವಾಗಿ ಸಾಗದೇ ಹೇಳು? ವ್ಯಸನಿಗಳಾಗದೆ, ಜವಾಬ್ದಾರಿಯುತವಾಗಿ, ಉತ್ತಮ ವ್ಯಕ್ತಿಗಳಾಗಿ ಬಾಳುವುದು ನಮ್ಮ ಧ್ಯೇಯವಾಗಬೇಕು. ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ಎಲ್ಲಾ ಕೆಲಸ ಕಲಿತಿರಬೇಕು...! ಇನ್ನು, ನನ್ನಿಂದ, ನನ್ನ ಇಬ್ಬರೂ ಮಕ್ಕಳಿಂದ ಸಮಾಜಕ್ಕೆ ಒಳಿತಾಗಲೆಂದೇ ಆಶಯ... 

ಇಲ್ಲಿಗೆ, ಸ್ನೇಹಾ ನನ್ನ ಪಾಲಿಗೆ ಆದರ್ಶ ಮಹಿಳೆಯಾಗಿಬಿಟ್ಟಳು...! ಆಕೆ ಕೇವಲ ಓರ್ವ ದಕ್ಷ ಅಧಿಕಾರಿ ಎಂದಷ್ಟೆ ಬಗೆದಿದ್ದೆ, ಇಲ್ಲಿ ಬಂದ ಮೇಲೆ, ಆಕೆಯ ಮೇಲಿದ್ದ ಗೌರವ ಇಮ್ಮಡಿಯಾಯಿತು. ಈರ್ವರು ಮಕ್ಕಳನ್ನು ದತ್ತು ಪಡೆಯುವುದರೊಂದಿಗೆ ಆಕೆ ಸಮಾಜದ ಒಳಿತಿಗಾಗಿಯೂ ಶ್ರಮಿಸುವವಳು ಎಂಬುದನ್ನರಿತೆ. ಹೀಗೆ, ಮನೆಗೆ ಹೋಗುವ ದಾರಿಯುದ್ದಕ್ಕೂ ಆಕೆಯನ್ನು ಪ್ರಶಂಸಿಸುತ್ತಾ ನಡೆದೆ. 


~PRN

Comments

Popular posts from this blog

We were never meant to be - Palle Vasu

The Palace of Illusions - Chitra Banerjee Divakaruni