ಜೀವನ...

ಇಡೀ ವಿಶ್ವದಲ್ಲಿ ಅತ್ಯಂತ ಅಯೋಮಯವಾದ ಸಂಗತಿ ಯಾವುದೆಂದು ಕೇಳಿದಾಗ, ಓರ್ವ ಹೇಳಿದನಂತೆ, "ಮನುಷ್ಯ ಜೀವನ ಸ್ವಾಮಿ, ಇನ್ನೇನು?" ಎಂದು. ಸಹಜವಲ್ಲವೇ...?

ಈ ಉತ್ತರ, ಇಂದಿನ ನಮ್ಮ ಜೀವನದಲ್ಲಿ, ಅತೀ ಪ್ರಸ್ತುತ. ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಅಲೆಯುವವರು ಎಷ್ಟು ಜನ ಬೇಕು? ಕೆಲಸ ಸಿಗದೇ, ಮನೆಯಲ್ಲೇ ಕೂತು ಕೊರಗುವವರು ಎಷ್ಟು ಜನ ಬೇಕು? ಸಿಗುವ ಮೂರು ಕಾಸು ವೇತನಕ್ಕೆ, ದಿನದಿಂದ ರಾತ್ರಿವರೆಗೂ ಕತ್ತೆಯಂತೆ ದುಡಿಯುವವರು ಎಷ್ಟು ಜನ ಬೇಕು? ಇವರೆಲ್ಲರ ಸ್ಥಿತಿ ಒಂದಾದರೆ, ಇನ್ನು ಮಾನಸಿಕವಾಗಿ ನೋವನ್ನು ಅನುಭಸುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ.

COVID-19 ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿ, ಕೆಲವರು ತಮಗೆ ಹತ್ತಿರವಾದವರನ್ನು ಕಳೆದುಕೊಂಡು, ಕೆಲವರು ಉದ್ಯೋಗ ಕಳೆದುಕೊಂಡು, ಮನೆಯಿಂದ ಹೊರಹೋಗಲಾಗದೆ ಕೆಲವರು, ಇದ್ದಲ್ಲಿಂದ ವಾಪಸ್ ಮನೆಗೆ ಬರಲಾಗದೆ ಕೆಲವರು, ಹೀಗೆ ಹತ್ತಾರು ಕಾರಣಗಳಿಂದ ಜನ ಖಿನ್ನತೆಗೆ ಒಳಗಾದರು. ಎಂದೂ ಕಂಡು ಕೇಳರಿಯದ "ಲಾಕ್ಡೌನ್" ಎಂಬ ಪ್ರಸಂಗವೂ ಜರುಗಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ಜಗತ್ತೇ ನಲುಗಿಹೋಯಿತು. ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗಿ, ಬಹು ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಇದೆಲ್ಲಾ ಮುಗಿದು ಎರಡರಿಂದ ಮೂರು ವರ್ಷ ಕಳೆದರೂ, ಅದರ ಪರಿಣಾಮವನ್ನು ಇಂದಿಗೂ ಅನುಭವಿಸುತ್ತಿದ್ದೇವೆ. ಕಣ್ಣಿಗೆ ಕಾಣದ ಒಂದು ಪುಟ್ಟ ಜೀವಿ, ಅತೀ ಶಕ್ತಿಶಾಲಿಯೆನಿಸಿದ ಮನುಷ್ಯನನ್ನು ಹೇಗೆ ನಲುಗಿಸಿಬಿಟ್ಟಿತಲ್ಲವೇ...?

ನಿನ್ನೆ ಒಂದು ವಾಕ್ ಹೋದಾಗ, ಬಗೆಬಗೆಯ ವಿದ್ಯಾಮಾನಗಳನ್ನು ಕಂಡೆ...! ನನ್ನಂತಯೇ ಕೆಲವರು ವಾಕ್ಗೆ ಬಂದಿದ್ದರು, ಹಲವರು ಮೋಜು ಮಸ್ತಿಯಲ್ಲಿ ತಲ್ಲಿನರಾಗಿದ್ದರು, ಬಳಿಯಲ್ಲಿಯೇ ಇರುವ ಆಸ್ಪತ್ರೆಗೆಂದು ದೂರದ ಊರುಗಳಿಂದ ಬಂದು ಕಾದು ಕಾದು ಸುಸ್ತಾಗಿದ್ದ ಜನ ಒಂದು ಕಡೆಯಾದರೆ, ದಿನದ ಕೆಲಸ ಮುಗಿಸಿ ಮನೆಗೆ ಹಿಂದಿರುಗುವವರು ಇನ್ನೊಂದೆಡೆ.

ಜೀವನ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ...! ಎಲ್ಲೋ ಐಷಾರಾಮಿ ಬಂಗಲೆಯಲ್ಲಿ, ದುಡ್ಡಿನ ರಾಶಿಯ ಮಧ್ಯೆ ಇರುವವರಿಗೇನು ಗೊತ್ತು ಕೂಲಿಗಳ ಪಾಡು. ತಿಂದು ತಿಂದು ಊಟ ಚೆಲ್ಲುವವರಿಗೇನು ಗೊತ್ತು ದಿನವೂ ಒಪ್ಪತ್ತು ಉಣ್ಣುವವನ ಹಸಿವು. "ಅನ್ನದ ಬೆಲೆ ಹಸಿದವನಿಗೆ ಮಾತ್ರ ತಿಳಿದೀತು" ಈ ಮಾತು ನೂರು ಪ್ರತಿಶತ ಸತ್ಯ.
ಇತ್ತೀಚಿಗೆ ಎಲ್ಲರಲ್ಲಿಯೂ ಒಂದು ಗುಣ ಎದ್ದು ಕಾಣುತ್ತಿರುತ್ತದೆ, ಏನೇ ಆದರೂ ಅದರಿಂದ ನನಗೇನು ನಷ್ಟ ಎಂಬ ಉದಾಸೀನದ ಭಾವನೆ.

ನಡೆಯುವ ಪ್ರತಿಯೊಂದು ಘಟನೆಯಲ್ಲಿಯು ಒಂದಾದರು ಒಳ್ಳೆಯ ಅಂಶವನ್ನು ಹುಡುಕಿ, ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಬಗೆದು ಬದುಕುವ ಅನಿವಾರ್ಯತೆಯಿದೆ. ಎಲ್ಲರು ಸೇರಿ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಬೇಕಿದೆ.

"ಸರ್ವೇ ಜನಾಂ ಸುಖಿನೋ ಭವಂತು"


~PRN

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni