ನನ್ನ ತಪ್ಪೇನು...?

ಯಾರೋ ಕೋಣೆಯತ್ತ ಬರುತ್ತಿರುವ ಮುನ್ಸೂಚನೆ. ಹೆಜ್ಜೆಗಳು ಹೇಳುತ್ತಿದ್ದವು, ವಿಷಯ ಗಂಭೀರವಾಗಿದೆ ಎಂದು. ಬಂದದ್ದು ಆಕೆಯ ಪತಿ. ಆದರೇಕೆ ಮುಖದಲ್ಲಿ ಎಂದಿನಂತೆ ಕಳೆಯಿಲ್ಲ? ಎಂದಿನಂತೆ ಮಂದಹಾಸವಿಲ್ಲ? ಆಶ್ಚರ್ಯವಾಯಿತು ಆಕೆಗೆ... ದಿನವೂ, "ಸೀತೆ ಇಂದೇನಾಯಿತು ಗೊತ್ತೇ?!" ಎನ್ನುತ್ತಾ ಬರುತ್ತಿದ್ದ ಶ್ರೀರಾಮ ಇಂದು ಮೌನಿಯಾಗಿದ್ದಾನೆ. ಮೊದಲೇ ಅಂದಾಜಿಸಿದ್ದ ಆಕೆಗೆ ತಿಳಿದಿತ್ತು, ಮುಂಬರುವ ವಾರ್ತೆಯು ಮುಖ್ಯವಾದದ್ದೆ ಎಂದು. 
ಬಂದವನೆ, "ಸೀತೆ, ನಿನ್ನ ಬಹಳ ದಿನಗಳ ಆಸೆಯನ್ನು ಈಡೇರಿಸುವ ಒಂದು ಯೋಚನೆ ಇಂದು ಮೂಡಿದೆ. ವಾಲ್ಮೀಕಿ ಆಶ್ರಮಕ್ಕೆ ಹೋಗೋಣವೆಂದು ಪರಿ ಪರಿಯಾಗಿ ಕೇಳುತ್ತಿದ್ದೆಯಲ್ಲವೇ, ಇಗೋ ಲಕ್ಷ್ಮಣ ನಾಳೆ ಮುಂಜಾನೆ ನಿನ್ನನ್ನು ಕರೆದೋಯ್ಯುವನಂತೆ" ಎಂದು ಒಮ್ಮೆಲೆ ಮಾತನಾಡತೊಡಗಿದ. ಆಕೆಗೆ ಒಂದು ಕಡೆ ಖುಷಿ, ಆಶ್ರಮಕ್ಕೆ ಹೋಗುತ್ತಿದ್ದೇನಲ್ಲ ಎಂದು. ಇನ್ನೊಂದು ಕಡೆ ಆಶ್ಚರ್ಯ, ರಾಮ ಬರುವುದಿಲ್ಲವೇ?, ಲಕ್ಷ್ಮಣನೇಕೆ...?
ಕೇಳುವ ಮನಸ್ಸಾಗಲಿಲ್ಲ, ರಾಮನಿಗೆ ಏನೋ ರಾಜಕೀಯ ಅನಿವಾರ್ಯತೆಯಿರಬೇಕು ಎಂದುಕೊಂಡಳು. 
ಆಗಿನಿಂದ ಶುರುವಾಯ್ತು, ಮನಸ್ಸಿನಲ್ಲಿ ಏನೋ ತಳಮಳ, ಏನನ್ನೋ ಕಳೆದುಕೊಳ್ಳುವೆ ಎಂಬ ವಿಚಿತ್ರ ಮುನ್ಸೂಚನೆ, ಆದರೆ ತಾನು ಕಳೆದುಕೊಳ್ಳುವುದೇನಿದೆ, ಕೆಲವೇ ಕೆಲವು ದಿನಗಳಲ್ಲಿ ತಾಯಿಯಾಗಲಿರುವೆ ಎಂದುಕೊಳ್ಳುತ್ತಾ, ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದಳು. ಪ್ರಯಾಣಕ್ಕಾಗಿ ಬೇಕಾಗುವ ವಸ್ತುಗಳನ್ನೆಲ್ಲ ಇಟ್ಟುಕೊಂಡಳು, ಅವುಗಳೊಂದಿಗೆ ವಾಲ್ಮೀಕಿ ಮಹರ್ಷಿಗಳಿಗೆ ಕೆಲವು ಉಡುಗೊರೆಗಳನ್ನೂ ಇರಿಸಿದಳು. ಬೆಳದಿಂಗಳನ್ನು ದಿಟ್ಟಿಸುತ್ತ, ಸೀತೆ ನಿದ್ದೆಗೆ ಜಾರಿದಳು.
ಮರುದಿನ ಬೆಳಗಾಗಲು, ಸೀತೆಯನ್ನು ಉತ್ಸಾಹದಿಂದ ಅರಮನೆಯಲ್ಲಿರುವ ಎಲ್ಲರೂ ಬೀಳ್ಕೊಟ್ಟರು. ಅಂತೆಯೇ ರಾಮನ ಬಳಿ ಬಂದಾಗ, ಆತ ಸಪ್ಪಗಿರುವುದನ್ನು ಕಂಡು, ತಾನು ಕೆಲವೇ ಕ್ಷಣ ಆತನಿಂದ ದೂರ ಇರುವುದನ್ನು ಪತಿಗೆ ಸಹಿಸಲಾಗುತ್ತಿಲ್ಲ, ಇನ್ನು ತಾನು ಶಾಶ್ವತವಾಗಿ ದೂರವಾದರೆ ಏನು ಮಾಡುವರೋ, ಎಂದುಕೊಳ್ಳುತ್ತಾ, ವಿದಾಯ ಹೇಳಿದಳು. ಯಾರು ಅಸ್ತು ಎಂದರೋ...!
ಲಕ್ಷ್ಮಣನೊಂದಿಗೆ ಕಾಡಿನ ನಡುವೆ ಕಿರುದಾರಿಯಲ್ಲಿ ತೆರಳುವಾಗ, ಸೀತೆಗೆ ಭಯವಾಗತೊಡಗಿತು. ಆ ಕತ್ತಲು, ಮೃಗಗಳ ಕರ್ಕಶವಾದ ಕೂಗು, ರಥದ ವೇಗದಿಂದಾಗಿ ಒಮ್ಮೆಲೆ ಎದುರು ಬಂದೊರಗುತ್ತಿದ್ದ ಮರದ ರೆಂಬೆ ಕೊಂಬೆಗಳು, ಏನೋ ಅಸಹನೆಯನ್ನುoಟು ಮಾಡುತ್ತಿದ್ದವು. ಹದಿನಾಲ್ಕು ವರ್ಷ ಕಾಡಿನಲ್ಲಿಯೇ ಇದ್ದೆವಲ್ಲವೇ, ಆಗೇಕೆ ಒಮ್ಮೆಯೂ ಇಂತಹ ಅನುಭವವಾಗಲಿಲ್ಲ! 
ಲಕ್ಷ್ಮಣ ಎಂದಿಗೂ ಇಷ್ಟು ಮೌನವಾಗಿರುವುದಿಲ್ಲ, ಅತ್ತಿಗೆ ಅದು ಹಾಗೆ, ಇದು ಹೀಗೆ, ಅದೇನು ಇದೇನು, ಎಂದು ಏನಾದರೂ ಒಂದು ಮಾತು ಆತನ ಬಾಯಿಂದ ಹೊರಹೋಮ್ಮತ್ತಲೇ ಇರುತ್ತಿತ್ತು, ಇಂದೇನಾಗಿದೆ? ಪ್ರಶ್ನೆಗಳ ಭಂಡಾರವೇ ಆಕೆಯ ತಲೆಯೊಳಗಿತ್ತು. ಇನ್ನೇನು ಆಶ್ರಮ ತಲುಪಬೇಕು ಎನ್ನುವಷ್ಟರಲ್ಲಿ, ರಥ ನಿಂತಿತು. ಇಬ್ಬರೂ ರಥದಿಂದ ಇಳಿದರು. ಸ್ವಲ್ಪ ಸಮಯದ ಬಳಿಕ, ಲಕ್ಷ್ಮಣ ಮೊದಲ ಬಾರಿಗೆ ಮಾತನಾಡಿದ. "ಅತ್ತಿಗೆ, ನನ್ನನ್ನು ಕ್ಷಮಿಸಿ. ಅಣ್ಣನ ಆಜ್ಞೆಗೆ ಕಟ್ಟುಬಿದ್ದು ಇಂತಹ ಕೃತ್ಯ ಮಾಡುತ್ತಿದ್ದೇನೆ. ತುಂಬು ಗರ್ಭಿಣಿಯಾದ ನಿಮ್ಮನ್ನು ಕಾಡಿನಲ್ಲಿ ಬಿಟ್ಟು ಬಾ ಎಂದು ಅಣ್ಣನ ಅಪ್ಪಣೆಯಾಗಿದೆ. ಅವನ ಮಾತಿಗೆ ಪ್ರತಿಮಾತನಾಡಲಾಗದೆ, ಒಪ್ಪಿಕೊಂಡೆ. ಮಾತೆ, ನಿಮ್ಮ ಮಗನನ್ನು ಕ್ಷಮಿಸಿ" ಎಂದು ಹೇಳುತ್ತಾ ಕಣ್ಣೀರು ಸುರಿಸತೊಡಗಿದ. ಸೀತೆಗೆ ಎದೆ ಒಡೆದಂತಾಯಿತು, ಮಾತೇ ಹೊರಡಲಿಲ್ಲ, ಶ್ವಾಸ ನಿಂತಂತಾಗಿ, ಪ್ರಾಣವು ದೇಹಬಿಟ್ಟು ಎಲ್ಲೋ ಓಡಿದಂತಾಯಿತು. ಆಕೆಯ ಬಾಯಿಂದ ಶಬ್ದ ಹೊರಬೀಳಲಿಲ್ಲ, ಲಕ್ಷ್ಮಣನನ್ನು ಒಮ್ಮೆ ನೋಡಿ ಮುಗುಳ್ನಕ್ಕಳು. 
ಇನ್ನು ತನ್ನಿಂದ ಸಹಿಸಲಾಗದು ಎಂದುಕೊಂಡ ಲಕ್ಷ್ಮಣ, ಆಕೆಯ ಚರಣ ಸ್ಪರ್ಶ ಮಾಡಿ, ತಾನಿನ್ನು ಹೊರಡುತ್ತೇನೆ ಎಂದವನೆ, ಕಾಡಿನ ದಟ್ಟತೆಯಲ್ಲಿ ಎಲ್ಲೋ ಮಾಯವಾಗಿಹೋದ. ಏಕಾಂಗಿಯಾದ ಸೀತೆಯ ರೋದನ ಕೇಳುವವರು ಅಡವಿಯ ನೀರವತೆ ಬಿಟ್ಟು ಬೇರೆ ಯಾರೂ ಇರಲಿಲ್ಲ...!

~PRN

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni