ಸಮೃದ್ಧ ಸಮಾಜದ ನಿರ್ಮಾಣಕ್ಕಾಗಿ ಮನುಷ್ಯನಲ್ಲಾಗಬೇಕಾದ ಬದಲಾವಣೆ ಏನು?...

ಸಮಾಜ ಎಂದರೇನು? ಹಲವು ಬಗೆಯ ವಿಚಾರಗಳು, ವಿವಿಧ ಸಂಪ್ರದಾಯಗಳು, ಅನೇಕ ಆಚರಣೆಗಳನ್ನು ಪಾಲಿಸುತ್ತಾ ಬಂದಿರುವ ಹಾಗೂ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸವಿರುವ ಜನರ ಗುಂಪನ್ನು ಸಮಾಜವೆಂದು ಕರೆಯುತ್ತೇವೆ. ಹೀಗೆ ನಿರ್ಮಾಣವಾದ ಸಮಾಜವನ್ನು ಮುನ್ನಡೆಸುವವನು ಮನುಷ್ಯನೇ ಅಲ್ಲವೇ? ಅಂತೆಯೇ ಈ ಸಮಾಜದಲ್ಲಿ ಏನೇ ಬದಲಾವಣೆಯಾದರೂ ಅದಕ್ಕೆ ನೇರ ಹೊಣೆ ಮನುಷ್ಯನೇ, ಒಳ್ಳೆಯ ನಿಟ್ಟಿನಲ್ಲಾಗಲಿ ಅಥವಾ ಕೆಟ್ಟ ನಿಟ್ಟಿನಲ್ಲಾಗಲಿ. 

"ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತಿದೆ. ಅದರಂತೆ, ಮಾನವನ ಜೀವನದಲ್ಲಿ ಬಾಲ್ಯವೆಂಬುದು ಒಂದು ಪ್ರಮುಖ ಘಟ್ಟ. ಕೆಲವೊಮ್ಮೆ, ಬಾಲ್ಯದಲ್ಲಿ ಕಲಿತ ಕೆಲವು ಪಾಠಗಳು, ಸಿಕ್ಕಂತಹ ಮಾರ್ಗದರ್ಶನ ಕೊನೆಯವರೆಗೂ ಪ್ರಯೋಜನಕಾರಿಯಾಗಿರುತ್ತವೆ. ಒಮ್ಮೆ ಬಾಲ್ಯ ಕಳೆದು ಯೌವ್ವನವನ್ನು ತಲುಪಿದಮೇಲೆ ಅದೇಕೋ ಮನುಷ್ಯನಲ್ಲಿ ಬಹುವಾಗಿ ಬದಲಾವಣೆಗಳು ಕಾಣಸಿಗುತ್ತವೆ. ಅರಿಷಡ್ವರ್ಗಗಳು ನಿಧಾನವಾಗಿ ಮನುಷ್ಯನನ್ನು ತಮ್ಮ ಸುಪರ್ದಿಗೆ ಹಾಕಿಕೊಳ್ಳುತ್ತಾ ಚಂಚಲತೆಯನ್ನು ಉಂಟುಮಾಡುತ್ತವೆ ಎಂದು ಕಾಣುತ್ತದೆ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಬೆರ್ಪಡಿಸಲಾಗದೆ ಕೆಲವೊಮ್ಮೆ ದುಡುಕಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡವರ ಎಷ್ಟು ಉದಾಹರಣೆಗಳು ಬೆಳಕಿಗೆ ಬಂದಿಲ್ಲ? ಯಾವುದೇ ಕಾರ್ಯ ಕೈಗೊಳ್ಳುವಾಗ ನೂರು ಬಾರಿ ಯೋಚಿಸಬೇಕು.

ಆಧುನಿಕರಣದ ಹೆಸರಿನಲ್ಲಿ ಮಾನವ ತನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದುಕೊಂಡನು. ಆದರೆ ನಾವು ನಮ್ಮಲ್ಲೇ ಕೇಳಿಕೊಳ್ಳಬೇಕಾದ ಒಂದೇ ಒಂದು ಪ್ರಶ್ನೆಯೆಂದರೆ ಈ ಬದಲಾವಣೆಗಳು ನಮಗೆ ಎಷ್ಟು ಪ್ರಯೋಜನಕಾರಿಯಾಗಿವೆ? ಅವನ್ನೆಲ್ಲಾ ಒಳಗೊಂಡು ನಾವು ಸಮರ್ಪಕವಾಗಿ ಜೀವನ ನಡೆಸುತ್ತಿದ್ದೇವೆಯೇ? 'ಮೊಡರ್ನ್ ಲೈಫ್ಸ್ಟೈಲ್' ಎಂಬುದಾಗಿ ಹೇಳಿಕೊಳ್ಳುವ ನಾವು ಪಾಶ್ಚಿಮಿಕ ಸಂಸ್ಕೃತಿಗೆ ಮಾರಿಹೋಗಿ ನಮ್ಮ ನೆಲಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಹಿಂದೆ ಆಚರಣೆಯಲ್ಲಿದ್ದ ಅನೇಕ ಸಂಪ್ರದಾಯಗಳು ನಶಿಸಿ ಹೋಗಿವೆ. ಇವೆಲ್ಲದರಿಂದಾಗಿ, ಮನುಷ್ಯ ಜೀವನದಲ್ಲಿ ಒಂದು ಹೊಸ ಸ್ಥರದ ಬದಲಾವಣೆ ಅನಿವಾರ್ಯವಾಗಿದೆ.

ಹಾಗಿದ್ದಲ್ಲಿ, ಇನ್ಯಾವ ಹೊಸ ರೂಢಿಗಳನ್ನು ಆಚರಣೆಗೆ ತಂದುಕೊಳ್ಳಬೇಕು ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ಎಂಬಂತೆ, ಕೆಳಗಿನ ಕೆಲವು ಅಂಶಗಳನ್ನು ನಾವು ಪುನಃ ಪಾಲಿಸಬೇಕು. 
ಸತ್ಯವಂತಿಕೆ - ಪ್ರತಿಯೊಬ್ಬರೂ ತಮ್ಮ ಸ್ವಾರ್ಥವನ್ನು ಬಿಟ್ಟು ಪ್ರಾಮಾಣಿಕರಾಗಬೇಕು. ಸುಳ್ಳು, ಹುಸಿ ಭರವಸೆಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ ಸತ್ಯವನ್ನು ಪ್ರತಿಪಾದಿಸುವವರ ಅವಶ್ಯಕತೆಯಿದೆ. 
ಗೌರವ - ಹಿರಿಯರನ್ನು ಗೌರವಿಸಬೇಕು. ತಂದೆ ತಾಯಿ, ಬಾಲ್ಯದಿಂದ ನಮ್ಮ ಎಲ್ಲಾ ಅವಶ್ಯಕತೆಗಳನ್ನು ಚಾಚುತಪ್ಪದೆ ಈಡೇರಿಸಿರುವ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ವೃದ್ಧಾಶ್ರಮಗಳು ಭರ್ತಿಯಾಗುತ್ತಿರುವ ಈ ದಿನಗಳಲ್ಲಿ, ತಂದೆ ತಾಯಿಗಳಿಗೆ ನಾವು ಹೆಮ್ಮೆಯ ಮಕ್ಕಳಾಗುವುದು ಅವಶ್ಯವಲ್ಲವೇ?
ತಾಳ್ಮೆ - ದುಡುಕಿನ ನಿರ್ಧಾರಗಳು ಕೆಟ್ಟ ಫಲ ಕೊಡುವುದೇ ಹೆಚ್ಚು. ಆದ್ದರಿಂದ, ಯಾವುದೇ ಸಮಸ್ಯೆಯಾಗಲಿ ತಾಳ್ಮೆಯಿಂದ ಯೋಚಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.
ನಿರಹಂಕಾರ - ಅಹಂಕಾರದಿಂದ ವರ್ತಿಸದೆ, ವಿನಯದಿಂದ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಕೆಲವೊಮ್ಮೆ ಕೋಪದಿಂದ ಆಗದ ಕೆಲಸ, ಸಹನೆಯಿಂದ ಆಗಬಹುದು.
ನಿರಪೇಕ್ಷೆ - ಕಾರ್ಯ ಯಾವುದೇ ಇರಲಿ, ಅದರ ಫಲದ ಬಗ್ಗೆ ನಮಗೆ ಹೆಚ್ಚು ಗಮನ ಇರಬಾರದು. " ನಾನು ಒಂದು ಕಾರ್ಯ ಕೈಗೊಂಡಿದ್ದೇನೆ, ಅದನ್ನು ಸಾಧಿಸುವಲ್ಲಿ ನನ್ನಿಂದಾಗುವಷ್ಟು ಶ್ರಮವಹಿಸುತ್ತೇನೆ " ಎಂಬುದು ನಮ್ಮ ಧ್ಯೇಯವಾಗಿರಬೇಕು. 
ಒಳಿತು - ಈ ಭೂಮಿಯ ಮೇಲೆ ಎಷ್ಟು ದಿನ ಬದುಕಿರುತ್ತೇವೋ ತಿಳಿಯದು. ಇರುವಷ್ಟು ದಿನ ಸುತ್ತಮುತ್ತಲಿನವರಿಗೆ ಒಳಿತನ್ನು ಮಾಡುವ ಬಗ್ಗೆ ಗಮನ ಹರಿಸಬೇಕು. 
ಪ್ರಕೃತಿ - ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ಕಾಳಜಿಯಿದ್ದರೆ ಒಳ್ಳೆಯದು. ಮನುಷ್ಯನ ಉಪಟಳದಿಂದ ತಪ್ಪೇ ಮಾಡದ ಅವುಗಳಿಗೆ ಶಿಕ್ಷೆಯಾಗಬಾರದಲ್ಲವೇ?

ಹೀಗೆ ಹೇಳುತ್ತಾ ಹೋದರೆ ಇನ್ನೂ ಹಲವಾರು ವಿಷಯಗಳುoಟು. ಇಂತಹ ಚಿಕ್ಕ ಪುಟ್ಟ ಬದಲಾವಣೆಗಳನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ, ಜೀವನದುದ್ದಕ್ಕೂ ಸಂತೋಷ, ನೆಮ್ಮದಿಯಿಂದಿರಲು ಸಾಧ್ಯ. 

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni