ವಿಶ್ವ ಜಲ ದಿನ
ವಿಶ್ವ ಜಲ ದಿನ: ಕೇವಲ ಒಂದು ದಿನದ ಮಾತೇ...?
ಸಕಲ ಜೀವಿಗಳಿಗೂ ಬೇಕು ನೀರು
ನೀರಿಲ್ಲದೆ ಇರಲಾಗದು ಸೂರು!
ಒಂದೊಂದು ಹನಿ ನೀರಿಗೂ ಇದೆ ಬೆಲೆ
ನೀರಿಲ್ಲದೆ ಇರದು ನಮಗೆ ನೆಲೆ!
ವಿಶ್ವದೆಲ್ಲೆಡೆ ಎದ್ದಿದೆ ನೀರಿನ ಹಾಹಾಕಾರ
ಬೆಳೆಸಿಕೊಳ್ಳಬೇಕು ಜಲಧಿಯೆಡೆಗೆ ಮಮಕಾರ!
ಬೇಸಿಗೆ ಕಾಲಿಡಲು ಪ್ರಾರಂಭಿಸುವುದು ಬಹುಶಃ ಮಾರ್ಚ್ ತಿಂಗಳಿನಲ್ಲೇ, ಸಾಮಾನ್ಯವಾಗಿರುವ ಹವಾಮಾನವನ್ನು ಕುರಿತು ಹೇಳುವುದಾದರೆ! ಇತ್ತೀಚಿಗೆ ಏನಾಗುತ್ತಿದೆ? ಅಂತರ್ಜಲ ಪ್ರಮಾಣದಲ್ಲಿ ಕೊರತೆ, ಅಕಾಲಿಕ ಮಳೆ, ಕೆಲವೊಮ್ಮೆ ಪ್ರವಾಹಗಳಾದರೆ, ಇನ್ನು ಕೆಲವೊಮ್ಮೆ ಭೂಮೆಯೇ ಬರಡು. ಹಲವಾರು ಕಡೆ ನೀರಿಲ್ಲದೆ, ದಾಹದಲ್ಲಿ ಜೀವನ ಸಾಗಿಸುವವರು ಎಷ್ಟೋ ಜನ ಸಿಗುತ್ತಾರೆ, ಇನ್ನೂ ಕೆಲವೆಡೆ ನೀರಿನ ಬೆಲೆಯೇ ತಿಳಿಯದ ಮೂರ್ಖರು ಅದನ್ನು ಪೋಲು ಮಾಡುತ್ತಾರೆ! ತಾಂತ್ರಿಕವಾಗಿ ನಾವು ಎಷ್ಟೇ ಪ್ರಗತಿ ಸಾಧಿಸಿದ್ದರೂ ನೀರಿಗೆ ಪರ್ಯಾಯವಾಗಿ ಯಾವುದೇ ವಸ್ತುವನ್ನು ಈವರೆಗೆ ಕಂಡುಹಿಡಿಯಲಾಗಲಿಲ್ಲ. ಇದರಿಂದ ತಿಳಿಯುತ್ತದೆ, ಮನುಷ್ಯ ಎಷ್ಟೇ ಮುಂದುವರಿದರೂ ಪ್ರಕೃತಿಗೆ ವಿರುದ್ಧವಾಗಿ ಸಾಗಲಾರನೆಂದು!
1993ರಿಂದ ನಮ್ಮಲ್ಲಿ ಎಲ್ಲರಿಗೂ ನೀರನ್ನು ಮಿತವಾಗಿ ಬಳಸಬೇಕು, ಮುಂದಿನ ಪೀಳಿಗೆಗೂ ನೀರನ್ನು ಉಳಿಸಬೇಕು ಎಂಬ ಪ್ರಜ್ಞೆ ಉಂಟಾಯಿತೆಂದು ಕಾಣುತ್ತದೆ, ಅಂದಿನಿಂದ ಹುಟ್ಟಿಕೊಂಡದ್ದು 'ವಿಶ್ವ ಜಲ ದಿನ' ಎಂಬ ವಾರ್ಷಿಕ ಆಚರಣೆ. ಮಾರ್ಚ್ 22ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ವಿಶ್ವ ಜಲ ದಿನವು ಮನುಕುಲಕ್ಕೆ ನೀರಿನ ಪ್ರಾಮುಖ್ಯತೆಯನ್ನು ನೆನಪಿಸುವ ಒಂದು ಪುಟ್ಟ ಪ್ರಯತ್ನ. ವರ್ಷಕ್ಕೊಂದು ಧ್ಯೇಯವಿರುವಂತೆ ಈ ಬಾರಿ, ಕರಗುತ್ತಿರುವ ಹಿಮದ ಪರಿಣಾಮಗಳು, ಹಾಗೂ ಹಿಮನದಿಗಳನ್ನು ಸಂರಕ್ಷಿಸುವ ಕುರಿತು ಹೆಚ್ಚಿನ ಮಹತ್ವವನ್ನು ನೀಡಬೇಕೆಂಬುದು ವಿಶ್ವಸಂಸ್ಥೆಯ ನಿರ್ಣಯವಾಗಿದೆ. ಅತಿಯಾದ ಜಾಗತಿಕರಣದಿಂದ ಉತ್ಪತ್ತಿಯಾದ ವಿಷಾನಿಲಗಳು ಮತ್ತು ಅಪಾರ ಪ್ರಮಾಣದ ಶಾಖದಿಂದ ತಾಪಮಾನವು ನಿರೀಕ್ಷೆಗಿಂತ ಏರಿಕೆಯಾದ ಕಾರಣ ಭೂಮಿಯ ಮೇಲಿನ ಹಿಮವು ನಿಧಾನವಾಗಿ ಕರಗಿ ಸಾಗರದಲ್ಲಿನ ನೀರಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ. ಆ ಸಮುದ್ರದಲ್ಲಿನ ನೀರಾದರು ಬಳಕೆಗೆ ಅನುಕೂಲಕರವಾದದ್ದೇ? ಪ್ರಯೋಜನಕ್ಕೆ ಬಾರದ ಉಪ್ಪು ನೀರದು, ಹೆಚ್ಚಾದಷ್ಟು ತಾಪತ್ರಯ!
ಇತ್ತೀಚಿಗೆ ನಮ್ಮಲ್ಲಿ ಮಹಾಕುಂಭ ಮೇಳವನ್ನು ಆಯೋಜಿಸಲಾಗಿತ್ತು, ಸುಮಾರು 66 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು! ನೀರಿನ ಗುಣಮಟ್ಟವನ್ನು ಕೆಡಿಸದಿರಲು ಅಲ್ಲಿನ ಅಧಿಕಾರಿಗಳು ಸಂಪೂರ್ಣ ನದಿಯಲ್ಲಿ ಸ್ನಾನಕ್ಕೆ ಅವಕಾಶ ಕೊಡಲಿಲ್ಲ, ಗುರುತಿಸಿಟ್ಟ ಜಾಗದಲ್ಲಿ ಮಾತ್ರ ಭಕ್ತಾದಿಗಳು ಮುಳುಗೇಳಬಹುದಿತ್ತು. ಇದು ಅಲ್ಲಿನವರಿಗಿದ್ದ ನೀರಿನ ಬಗೆಗಿನ ಕಾಳಜಿಯನ್ನು ಎತ್ತಿಹಿಡಿಯುತ್ತದೆ. ನೋಡುತ್ತಾ ಹೋದರೆ, ಮೊದಲಿನಿಂದಲೇ ಹಲವಾರು ಜಲ ಸಂರಕ್ಷಣಾ ಯೋಜನೆಗಳಾದಂತಹ 'ನಮಾಮಿ ಗಂಗೆ', 'ಜಲ ಶಕ್ತಿ ಅಭಿಯಾನ' 'ಅಟಲ್ ಸರೋವರ ಮಿಷನ್', 'ನರ್ಮದಾ ಬಚಾವ್ ಆಂದೋಲನ', ಇತ್ಯಾದಿಗಳು ಜಾರಿಯಲ್ಲಿವೆ. ಅವುಗಳು ಮರುಜೀವ ಪಡೆದುಕೊಳ್ಳಬೇಕಷ್ಟೇ.
ಇಂತಹ ಪ್ರಮುಖ ದಿನಗಳಂದು ಎಲ್ಲರೂ ಭಾಷಣಗಳನ್ನು ಮಾಡುತ್ತಾರೆ, ಆದರೆ ಎಷ್ಟು ಜನ ಆ ಭಾಷಣದಲ್ಲಿದ್ದ ಸಾರವನ್ನು ಗ್ರಹಿಸಿ ತಮ್ಮ ನಿಜಜೀವನದಲ್ಲಿ ಅಳವಡಿಸಿಕೊಳ್ಳುವವರಿದ್ದಾರೆ? ಹಾಗಂತ, ಬರಿಯೆ ಒಂದು ದಿನದ ಮಟ್ಟಿಗೆ ನೀರು ಪೋಲುಮಾಡದಿದ್ದರಾಯಿತೇ? ಉತ್ತಮ ಮನುಜನಾದವನು ತನ್ನ ಕೈಲಾದಷ್ಟು ನೀರನ್ನು ಉಳಿಸುವ ದಿಶೆಯಲ್ಲಿ ಕಾರ್ಯೋನ್ಮುಖನಾಗಬೇಕು. ತನಗಷ್ಟೇ ಅಲ್ಲದೆ, ಮುಂಬರುವ ತಲೆಮಾರುಗಳಿಗೂ ಶುದ್ಧ ನೀರು, ಶುದ್ಧ ಗಾಳಿ, ಶುದ್ಧ ಪರಿಸರವನ್ನು ಉಳಿಸಿ ಹೋಗಬೇಕು! ಅದು ನಮ್ಮೆಲ್ಲರ ಜವಾಬ್ದಾರಿ.
ಪೋಲು ಮಾಡದೆ ನೀರು ಉಳಿಸಿ
ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಿ!
ಮುಂದಿನ ಪೀಳಿಗೆಗೂ ಶೇಖರಿಸಿ ಇಡಿ
ವೃಕ್ಷಗಳನ್ನು ಕಡಿಯದೆ ಬೆಳೆಯಲು ಬಿಡಿ!
ಬಾಯಾರಿದ ಜೀವದ ದಾಹ ನೀಗಿಸೋಣ
ಅಂತರ್ಜಲ ಕಾಪಾಡಲು ಪಣತೋಡೋಣ!
~PRN
Comments
Post a Comment