ಕಾಡು ಸೊರಗಿ ನಾಡು ಬಾಡದಿರಲಿ

ಕಾಡು ಸೊರಗಿ ನಾಡು ಬಾಡದಿರಲಿ 

What we are doing to the forests of the world is but a mirror reflection of what we are doing to ourselves and to one another.

ಈ ಮಾತು ಇಂದಿಗೆ ಎಷ್ಟು ಪ್ರಸ್ತುತ! ನಿಸರ್ಗವೆಂಬುದು ಮನುಷ್ಯನಿಗೆ ಸಿಕ್ಕಂತ ಅತಿ ಶ್ರೇಷ್ಠ ವರ, ಆದರೆ ಅದೇ ವರವನ್ನು ನಾವಿಂದು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ಪ್ರಕೃತಿ ಹೇಗೆ ನಮ್ಮ ಎಲ್ಲಾ ಬೇಕು ಬೇಡಗಳನ್ನು ಪೂರೈಸಬಹುದೋ ಅಂತೆಯೇ ನಮ್ಮಿಂದ ಸರ್ವಸ್ವವನ್ನೂ ಕಿತ್ತುಕೊಳ್ಳಲೂಬಹುದು. ಇದಕ್ಕೆ ಇತ್ತೀಚಿಗಷ್ಟೆ ಮ್ಯಾನ್ಮರ್ ಹಾಗು ಥೈಲ್ಯಾಂಡ್ಗಳಲ್ಲಾದ ದೊಡ್ಡ ಪ್ರಮಾಣದ ಭೂಕಂಪಗಳೇ ಸಾಕ್ಷಿ. ಮನುಷ್ಯ ತಾನು ಮಾಡಬಹುದಾದ ಅಪರಾಧಗಳನ್ನೆಲ್ಲಾ ಮಾಡಿ, ಇಂತಹ ಪ್ರಕೃತಿ ವಿಕೋಪಗಳು ನಡೆದಾಗ ಅಮಾಯಕನಂತೆ ಕೂತುಬಿಡುತ್ತಾನೆ! ಮಾನವನ ದುಶ್ಕೃತ್ಯಗಳಿಗೆ ಕನ್ನಡಿ ಹಿಡಿಯುವಂತೆ ಮಾರ್ಚ್ ಕೊನೆಯ ವಾರದಂದು ತೆಲಂಗಾಣ ಸರ್ಕಾರವು ಹೈದೆರಾಬಾದ್ ನಗರಿಯ ಮಧ್ಯಭಾಗದಲ್ಲಿರುವ ಕಂಚ ಗಚಿಬೌಲಿ ಅರಣ್ಯನಾಶಕ್ಕೆ ನಾಂದಿ ಹಾಡಿತು. 

2,300 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ನಿಸರ್ಗ ರಮಣೀಯ ಪ್ರದೇಶವು ಸುಮಾರು 700 ಜಾತಿಯ ಗಿಡಮರಗಳಿಗೆ ಆಸರೆಯಾಗಿದ್ದು ಸಾವಿರಾರು ಪ್ರಾಣಿಗಳ ಹಾಗು 220 ಜಾತಿಯ ಪಕ್ಷಿಗಳ ವಾಸಸ್ಥಳವಾಗಿದೆ. ಹೈದೆರಾಬಾದ್ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಈ ಪ್ರದೇಶದ ಸ್ವಲ್ಪ ಭಾಗವನ್ನು ಗುರುತಿಸಲಾಗಿತ್ತು ಹಾಗು ಅದರ ಪೂರ್ಣ ಉಸ್ತುವಾರಿಯನ್ನು ತೆಲಂಗಾಣ ಸರ್ಕಾರದ ಸುಪರ್ದಿಗೆ ಒಪ್ಪಿಸಲಾಗಿತ್ತು. ಈ ಪ್ರದೇಶ ಕೇವಲ ಕಾಡು ಮಾತ್ರವಲ್ಲದೆ, ಆಧುನಿಕ ಯುಗದಲ್ಲಿ ಮನುಷ್ಯನಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒಳಗೊಂಡಿದೆ, ಅರ್ಥಾತ್ ಶಾಲಾ-ಕಾಲೇಜುಗಳಿಂದ ಹಿಡಿದು ದೊಡ್ಡ ದೊಡ್ಡ ಟೆಕ್-ಕಂಪನಿಗಳನ್ನೂ ಹೊಂದಿದೆ. 

ತೆಲಂಗಾಣ ಸರ್ಕಾರವು ಕಳೆದ ಫೆಬ್ರವರಿ ತಿಂಗಳಿನಲ್ಲಿ ಈ ವಿಶಾಲವಾದ ಅರಣ್ಯ ಪ್ರದೇಶದ ಸುಮಾರು 400 ಎಕರೆಗಳಷ್ಟು ಜಮೀನನ್ನು ಐಟಿ ಪಾರ್ಕ್ಗಳ ನಿರ್ಮಾಣಕ್ಕಾಗಿ ಹರಾಜುಮಾಡಲು ತೀರ್ಮಾನಿಸಿತು. ಅಂತೆಯೇ, ಕಾಡುನಾಶಮಾಡುವ ಅತ್ಯಂತ ಕ್ರೂರ ನಿರ್ಣಯ ಕೈಗೊಳ್ಳಲಾಯಿತು. ಈ ಒಂದು ಹೂಡಿಕೆಯು ಅಂದಾಜು 50,000 ಕೋಟಿ ರೂಪಾಯಿಗಳಷ್ಟು ಆದಾಯ ಹಾಗು 5 ಲಕ್ಷ ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ, ಇದರಿಂದಾಗಿ ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಭಾರಿ ಪ್ರಭಾವ ಬೀರಬಹುದು ಎಂಬುದು ಸರ್ಕಾರದ ವಾದ.

ಅಂತೆಯೇ, ಮಾರ್ಚ್ ಕೊನೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರವು ಮುಂದುವರೆದಿತು. ತಮ್ಮ ಏಕೈಕ ನಿಲಯವಾದ ಅಡವಿ ಈ ಪರಿಯಾಗಿ ನಾಶವಾಗುತ್ತಿರುವುದನ್ನು ಕಂಡ ಪ್ರಾಣಿ ಪಕ್ಷಿಗಳು ಹೌಹಾರಿದವು, ಅಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು. ನಿನ್ನೆ ಇನ್ಸ್ಟಾಗ್ರಾಮ್ನಲ್ಲಿ ಇದರ ಕುರಿತು ಓರ್ವರು ಏಅಯ್ ಉಪಯೋಗಿಸಿ ಮಾಡಿದ ಒಂದು ವಿಡಿಯೋ ಹಂಚಿಕೊಂಡಿದ್ದರು, ಅದನ್ನು ಕಂಡ ಯಾರೂ ಆ ಪ್ರಾಣಿಗಳ ಸ್ಥಿತಿಯ ಬಗ್ಗೆ ಶೋಕಪಡದೆ ಇದ್ದಿರಲಾರರು ಎಂದು ಭಾವಿಸುತ್ತೇನೆ.

ಕಾಡು ನಾಶವಾಗುತ್ತಿರುವುದನ್ನು ಕಂಡು ತೆಲಂಗಾಣದಲ್ಲಿನ ಕಾಲೇಜು ವಿದ್ಯಾರ್ಥಿಗಳೆಲ್ಲ ಒಟ್ಟುಗೂಡಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡರು. ಇದರ ಮೂಲಕ ತಮ್ಮ ಪರಿಸರ ಪ್ರಜ್ಞೆಯನ್ನು ಎಲ್ಲರಿಗೂ ಪರಿಚಯಿಸಿದರು, ಇದುವರೆಗೆ ತಾವು ಪಡೆಗೆ ಶಿಕ್ಷಣದ ಸಾರ್ಥಕ್ಯವನ್ನು ಸ್ಥಾಪಿಸಿದರು. ಅವರು ವಾಸ್ತವದಲ್ಲಿ 'ಎಜುಕೇಟೆಡ್', ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಟಾವಣೆ ಮಾಡುವವರಲ್ಲ! ವರ್ತಮಾನದ ಪ್ರಾಮುಖ್ಯತೆಯನ್ನರಿತ ಸುಪ್ರೀಂ ಕೋರ್ಟ್ ಇದೇ ಏಪ್ರಿಲ್ 3ರಂದು ಈ ನಿರ್ದಯಿ ಅರಣ್ಯನಾಶಕ್ಕೆ ಪೂರ್ಣ ವಿರಾಮ ಹಾಕಿತು, ಇದರಿಂದಾಗಿ ಪರಿಸರದ ಬಗ್ಗೆ ಕಳಕಳಿಯುಳ್ಳ ಎಲ್ಲರೂ ಒಮ್ಮೆ ನೆಟ್ಟುಸಿರು ಬಿಡುವಂತಾಯಿತು.

ಅಕಸ್ಮಾತ್ ಕಂಚ ಗಚಿಬೌಲಿ ಪ್ರದೇಶದ ಆ 400 ಎಕರೆ ಅರಣ್ಯಭೂಮಿಯೂ ನಾಶವಾಗಿ ಹೋಗಿದ್ದರೆ, ಅಲ್ಲಿನ ತಾಪಮಾನವು ಶೇಕಡಾ 1-4 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಗಬಹುದು ಎಂಬುದೊಂದು ವರದಿಯಿತ್ತು, ಅದರ ನಂತರವೂ ಸರ್ಕಾರ ಈ ದಡ್ಡ ನಿರ್ಧಾರ ಕೈಗೊಂಡದ್ದು ಲೋಪವೇ ಸರಿ. ಒಟ್ಟಾರೆ ಈ ಪ್ರಕರಣವು ಅಪರಿಪೂರ್ಣ ಚಿಂತನೆಯನ್ನು ಚಿತ್ರಿಸುತ್ತದೆ. ಪರಿಸರ ನಾಶವು ಎಷ್ಟು ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಸುತ್ತ ಮುತ್ತ ಇಂತಹ ಕಾರ್ಯಗಳು ನಡೆಯುತ್ತಿದ್ದಲ್ಲಿ, ಅದನ್ನು ತಪ್ಪಿಸಲು ಮುಂದಾಗಬೇಕು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಬೇಕು.


~ಪ್ರಾಪ್ತಿ 

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni