ಪ್ರಾಪ್ತಿ - ವಸುಮತಿ ಉಡುಪ
ಪ್ರಾಪ್ತಿ - ವಸುಮತಿ ಉಡುಪ
ತಂದೆ-ಮಗಳ ನಡುವಿನ ಪ್ರೀತಿಯ ಸಂಬಂಧದ ಒಂದು ಅಪರೂಪದ ಕಥೆಯನ್ನು ಈ ಕಾದಂಬರಿಯು ಸೂಕ್ಷ್ಮವಾಗಿ ಚಿತ್ರಿಸಿದೆ. ಗಂಡ-ಹೆಂಡಿರು ಮತ್ತವರ ಈರ್ವರು ಮಕ್ಕಳನ್ನ ಒಳಗೊಂಡ ಕೂಡುಕುಟುಂಬ ಮೊದಲಿಗೆ ಒಂದು ಆದರ್ಶ ಸಮೂಹವಾಗಿದ್ದು, ಓರ್ವ ಸದಸ್ಯರ ನಿಧನದ ನಂತರ ಯಾವ ಬಗೆಯ ತಿರುವು ಪಡೆಯುತ್ತದೆ ಎಂಬುದನ್ನು ಲೇಖಕರು ಅಚ್ಚುಕಟ್ಟಾಗಿ ತಿಳಿಸಿದ್ದಾರೆ.
ಸುನಂದೆ ಕ್ಯಾನ್ಸರ್ನಿಂದ ಪ್ರಾಣ ಬಿಟ್ಟಾಗ, ಹೇಗೆ ಆಕೆಯ ಹದಿಮೂರು ವರ್ಷದ ಮಗಳು ಸತ್ಯಭಾಮ ಮನೆಯ ಜವಾಬ್ದಾರಿಯನ್ನು ಹೊತ್ತಳು ಎಂಬುದರಿಂದ ಹಿಡಿದು, ಏನೂ ಅರ್ಥವಾಗದ ತನ್ನ ಎಂಟು ವರ್ಷದ ತಮ್ಮನನ್ನು ಅಮ್ಮನ ಕೊರತೆ ಬಾಧಿಸದಂತೆ ಹೇಗೆ ನೋಡಿಕೊಂಡಳು, ಹೆಂಡತಿಯನ್ನು ಕಳೆದುಕೊಂಡು ಮನೆಗೆಲಸಗಳಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದ ತನ್ನ ತಂದೆಗೆ ಹೇಗೆ ಸಹಾಯ ಹಸ್ತವಾದಳು ಎಂಬುದು ಓದುಗರ ಮನಮುಟ್ಟುವಂತಿದೆ.
ಎಲ್ಲವೂ ಸಾಂಗವಾಗಿ ಸಾಗುತ್ತಿದ್ದುದರ ನಡುವೆ ತಂದೆ ಮಗಳ ಮಧ್ಯೆ ಮುನಿಸು, ತಮ್ಮ-ತಮ್ಮ ನಡತೆಗೆ ತಾವು ಕೊಟ್ಟುಕೊಳ್ಳುವ ಸಮರ್ಥನೆಯಿಂದ ಹಿಡಿದು ಸತ್ಯಭಾಮ ವೆಂಕಟೇಶನ ಜೊತೆ ಓಡಿಹೋಗುವವರೆಗಿನ ಪ್ರಸಂಗ ಒಂದು ಅಧ್ಯಾಯವಾಗಿತ್ತು. ತಮ್ಮ ಕಾಲಮೇಲೆ ತಾವು ನಿಂತುಕೊಳ್ಳುವವರೆಗೂ ಅಪ್ಪನನ್ನು ಕಾಣುವುದಿಲ್ಲ ಎಂಬ ಭಾಮಳ ನಿರ್ಧಾರ ದಿಟ್ಟತನದ್ದಾಗಿತ್ತು. ಅದರಂತೆ, ಭಾರ್ಗವ ದೊಡ್ಡವನಾಗಿ, ಅವರ ಮನೆಯ ಸೊಸೆಯಾಗಿ ಬಂದ ಶೀಲಳ ಮುಂದಾಲೋಚನೆಗಳೂ ಗಣನೀಯವೇ.
ಇನ್ನೇನು ಮನೆಯಲ್ಲೆಲ್ಲರಿಗೂ ಚಿದಾನಂದ ಹೊರೆಯಾದಾಗ, ಹೇಗೆ ಭಾಮ ತನ್ನ ತಂದೆಯ ಜವಾಬ್ದಾರಿಯನ್ನು ಪುನಃ ವಹಿಸಿಕೊಂಡಳು ಎಂಬುದು ಎಷ್ಟು ಗಮನರ್ಹವೋ, ಅಷ್ಟೇ ಅನುಕರಣೀಯ. ಮಗನ ಮನೆಯಲ್ಲಿ ಎಲ್ಲರಿಗೂ ಒಂದೊಂದು ಮಾತು ಕೂರಿಸುತ್ತಿದ್ದ ಚಿದಾನಂದ ಮಗಳೊಡನೆ ಪುಟ್ಟ ಮಗುವಿನಂತೆ ಇರುತ್ತಿದ್ದ.
ಒಟ್ಟಾರೆಯಾಗಿ, ಆಧುನಿಕ ಯುಗದಲ್ಲಿ ಮಕ್ಕಳಿಗೆ ಹಾಗೂ ಅವರ ತಂದೆ-ತಾಯಿಯರಿಗೆ ಒಳ್ಳೆಯ ಸಂದೇಶವನ್ನು ಈ ಕಾದಂಬರಿಯು ನೀಡುತ್ತದೆ ಎಂಬುದು ನನ್ನ ಅನಿಸಿಕೆ.
.
.
.
.
.
.
.
.
Read for life!
Comments
Post a Comment