ನಳ ದಮಯಂತೀ - ಡಾ. ಕೆ. ಎಸ್. ನಾರಾಯಣಾಚಾರ್ಯ
ನಳ ದಮಯಂತೀ - ಡಾ. ಕೆ. ಎಸ್. ನಾರಾಯಣಾಚಾರ್ಯ
ಮಹಾಭಾರತ ಎಲ್ಲರಿಗೂ ಚಿರಪರಿಚಿತ. ಸಂಪೂರ್ಣವಾಗಿ ಓದಿದರೆ ದೀರ್ಘಗದ್ಯವೂ ಹೌದು. ಮುಖ್ಯ ಕಥೆಯು ಸಾಗುತ್ತಲೇ, ಅನೇಕ ಉಪಕತೆಗಳನ್ನೂ ಕಾಣಬಹುದು. ನಹುಷ ಮಹಾರಾಜನ ಕಥೆ, ಕೃಷ್ಣನ ಜನನ ಮತ್ತು ಜೀವನ, ಭೀಮನಲ್ಲಿಗೆ ಹನುಮಂತನ ಇದಿರುಗೊಳ್ಳುವಿಕೆ, ದುರ್ವಾಸರ ಭೇಟಿ, ಇನ್ನೂ ಹೆಚ್ಚಿನ ಪೂರಕ ಕಥೆಗಳ ಸಮೂಹಗಳನ್ನೇ ಮಹಾಭಾರತವು ಒಳಗೊಂಡಿದೆ. ಅವುಗಳಲ್ಲಿ ಪಾಂಡವರ ಸನ್ನಿವೇಶವನ್ನು ಹೋಲುವ ಇನ್ನೊಂದು ಪ್ರಸಂಗವನ್ನು ಅವರ ವನವಾಸದ ಸಂದರ್ಭದಲ್ಲಿ ಬೃಹದಶ್ವಮುನಿಗಳು ಅವರಿಗೆ ತಿಳಿಸಿಕೊಡುತ್ತಾರೆ. ಅದುವೇ ನಳ ದಮಯಂತಿಯರ ಚರಿತೆ.
ನಿಷಧ ರಾಜ್ಯದ ದೊರೆಯಾಗಿದ್ದ ವೀರಸೇನನ ಪುತ್ರ ನಳ ಮಹಾರಾಜನಿಗೂ ವಿದರ್ಭ ರಾಜ್ಯದ ರಾಜನಾದ ಭೀಮನ ಪುತ್ರಿ ದಮಯಂತಿಗೂ ಹಂಸದ ಮುಖೇನವಾಗಿ ಹುಟ್ಟಿದ ಪ್ರೀತಿ, ಮುಂದೆ ಸ್ವಯಂವರದವರೆಗೂ ಮುಟ್ಟಿ, ಅಲ್ಲಿ ಅವರಿಗೆ ಉಂಟಾಗುವ ದೇವತೆಗಳ ಪರೀಕ್ಷೆ, ದಮಯಂತಿಯ ಪವಿತ್ರತೆಯ ನಿರೂಪಣೆ, ನಳ-ದಮಯಂತಿಯರ ವಿವಾಹ, ದೇವತೆಗಳ ವರದಾನದೊಂದಿಗೆ ಸಮಾಪ್ತಗೊಳ್ಳುತ್ತದೆ.
ಮುಂದೆ ಕಲಿ-ದ್ವಾಪರರ ಕಾಟದಿಂದ ಬದಲಾಗುವ ಕತೆಯ ಚಿತ್ರಣ, ಪುಷ್ಕರನ ದುರಾಸೆ, ಶರೀರ ಹೊಕ್ಕ ಕಲಿಯಿಂದಾದ ನಳನ ಮತಿಭ್ರಮಣೆ, ಜೂಜಿನಲ್ಲಿ ಆತನ ಸೋಲು, ನಳ-ದಮಯಂತಿಯರ ವನವಾಸದ ನಿಶ್ಚಯವು ಕೊನೆಯಲ್ಲಿ ನಳನಿಂದ ದಮಯಂತಿಯ ಪರಿತ್ಯಜಿಸುವಿಕೆಯೊಂದಿಗೆ ಮುಕ್ತಾಯಗೊಳ್ಳುವುದು.
ಕಾರ್ಕೊಟಕನಿಂದ ದೊರೆತ ಶಾಪದ ರೂಪದ ವರವು ಹೇಗೆ ನಳನ ಅಜ್ಞಾತಕ್ಕೆ ನೆರವಾಗುವುದೆಂದು ಕಾಣಬಹುದು. ನಳನನ್ನು ಪತ್ತೆಹಚ್ಚಲು ತವರು ಸೇರಿದ ದಮಯಂತಿಯು ರಚಿಸುವ ಕವಿತೆ, ಅದಕ್ಕೆ ಅಯೋಧ್ಯಾ ನಗರಿಯಲ್ಲಿದ್ದ ಸಾರಥಿಯ ನಳನನ್ನೇ ಹೋಲುವ ಉತ್ತರ, ಆತನು ಅಲ್ಲಿರುವ ಸೂಚನೆಯನ್ನು ನೀಡುತ್ತದೆ. ಮರುಸ್ವಯಂವರದ ನೆಪದಲ್ಲಿ, ದಮಯಂತಿಯು ನಳನನ್ನು ವಿದರ್ಭಕ್ಕೆ ಬರಮಾಡಿಕೊಂಡು, ಇಬ್ಬರ ಪುನರ್ಮಿಲನವಾಗಿ, ಪುನಃ ಜೂಜಿನಿಂದಲೇ ಕಳೆದುಕೊಂಡ ರಾಜ್ಯವನ್ನು ಪುಷ್ಕರನಿಂದ ಮತ್ತೆ ಹಿಂಪಡೆಯುವರು. ಅಲ್ಲಿಗೆ, ಅವರಿಗೆ ಹಿಡಿದ ಕಲಿ-ದ್ವಾಪರರ ಬಾಧೆ ಸಂಪೂರ್ಣವಾಗಿ ದೂರವಾಗಿ ಸಮೃದ್ಧ ಜೀವನ ನಡೆಸುವರು.
ಕತೆ ಹೇಳಿ ಮುಗಿಸಿದ ಮುನಿಗಳು ದ್ರೌಪದಿಯನ್ನ ಉದ್ದೇಶಿಸಿ, "ವನವಾಸದಲ್ಲಿ ನೀನು ನಿನ್ನ ಪತಿಯರೊಂದಿಗೇ ಇರುವೆ, ದಮಯಂತಿಯಂತೆ ದಟ್ಟಡವಿಯಲ್ಲಿ ತ್ಯಜಿಸಲ್ಪಡಲಿಲ್ಲ" ಎನ್ನುತ್ತಾ, "ನಿಮ್ಮ ಕತೆಗೂ ನಳರಾಜನ ಕತೆಗೂ ಇರುವ ವ್ಯತ್ಯಾಸ ಹೇಳಬಲ್ಲಿರಾ?" ಎಂದು ಪ್ರಶ್ನಿಸಿದಾಗ "ನಳರಾಜ ನಮ್ಮ ಅಣ್ಣನಂತೆ ತನ್ನ ಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಡಲಿಲ್ಲ" ಎಂದು ಭೀಮ ಕಾಯದೇ ಉತ್ತರಿಸಿಬಿಟ್ಟ. ಈ ಉತ್ತರ, ಖಾರವಾಗಿದ್ದರೂ, ಸತ್ಯವಲ್ಲವೇ? ಸತ್ಯ ಎಂದಾದರು ರುಚಿಸುವುದೇ?
ಅಧ್ಭುತ ಕತೆಯ, ಚಿಕ್ಕದಾದ-ಚೊಕ್ಕದಾದ ವಿವರಣೆ ಎನ್ನಬಹುದು!
.
.
.
.
.
.
.
.
Read for life!
Comments
Post a Comment