ಪ್ರಜೆಗಳೇ ಪ್ರಭುಗಳಾಗುವ ಭಾಗ್ಯ ದೊರೆತ ದಿನ

ಪ್ರಜೆಗಳೇ ಪ್ರಭುಗಳಾಗುವ ಭಾಗ್ಯ ದೊರೆತ ದಿನ 

ಭಾರತವು ಗಣರಾಜ್ಯವಾಗಿ ಇಂದಿಗೆ ೭೬ ವರ್ಷಗಳು ತುಂಬಿವೆ. ಸ್ವಾತಂತ್ರ್ಯ ಹೊಂದಿದಾಗಿನಿಂದ ಗಣರಾಜ್ಯವಾಗುವಲ್ಲಿಗೆ ಅನೇಕ ವರ್ತಮಾನಗಳನ್ನು ಎದುರಿಸಿ ತನ್ನದೇ ಸ್ವಂತ ಸಂವಿಧಾನವನ್ನು ಲೋಕಾರ್ಪಣೆಗೊಳಿಸಿದ ನಮ್ಮ ದೇಶವು ಇಂದಿಗೆ ವಿಶ್ವದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಏಕೈಕ ರಾಷ್ಟ್ರವಾಗಿದೆ, ಜ್ಯೇಷ್ಠ ಗಣರಾಜ್ಯವಾಗಿದೆ. ಬಹು ಮತ-ಧರ್ಮ, ಜಾತಿ, ಭಾಷೆ, ಪ್ರಾಕೃತಿಕ ಸಂಪತ್ತನ್ನು ಹೊಂದಿರುವ, ಸರ್ವ ಸಮಾನತೆಯನ್ನು ಪ್ರತಿಪಾದಿಸುವ 'ವಿಶ್ವಗುರು' ಎಂಬ ಹೆಗ್ಗಳಿಕೆಗೆ ಇಂದು ಭಾರತವು ಪಾತ್ರವಾಗಿದೆ. ಪ್ರಾಚೀನತೆ, ಸಂಪ್ರದಾಯ, ಪರಂಪರೆ ಇತ್ಯಾದಿ ಆದರ್ಶಗಳಿಂದ ವಿಶ್ವದೆಲ್ಲೆಡೆ ಸುಪ್ರಸಿದ್ಧವಾಗಿದೆ. 

ಇನ್ನು ಗಣರಾಜ್ಯ ದಿನಾಚರಣೆಯು ಸಂವಿಧಾನವನ್ನು ಜಾರಿಗೆ ತರಲಾದ ದಿನವನ್ನು ಗುರುತಿಸಲು ವಾರ್ಷಿಕವಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಕೆಂಪು ಕೋಟೆಯ ಮೈದಾನದಲ್ಲಿ ಪ್ರಸಿದ್ಧವಾದ 'ರಿಪಬ್ಲಿಕ್ ಡೇ ಪರೇಡ್' ಆಯೋಜಿಸಲಾಗುತ್ತದೆ. ಸೇನೆ, ನೌಕಾದಳ ಹಾಗು ವಾಯುದಳಗಳು ತಮ್ಮ ಶಿಸ್ತುಪ್ರದರ್ಶನ ಮಾಡುತ್ತಾ ಮುಂದುವರಿದರೆ ಬೇರೆ ಬೇರೆ ರಾಜ್ಯಗಳಿಂದ ಸ್ತಬ್ಧಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ. ಒಟ್ಟಾರೆ ಜನವರಿ ೨೬ನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ, ಇದನ್ನು ಭಾರತದ ವಿಶೇಷತೆ ಎನ್ನಬಹುದು.

ಈ ದಿನದ ಆಚರಣೆಯ ಇತಿಹಾಸದ ಆಳಕ್ಕೆ ಬರೋಣ! ಎರಡನೇ ವಿಶ್ವಯುದ್ಧದ ಕಹಿ ಅನುಭವಗಳ ಫಲವಾಗಿ, ಭಾರತದ ಮೇಲೆ ಬ್ರಿಟಿಷರ ಹಿಡಿತ ಕುಸಿಯುತ್ತಾ ಬಂದಿತು. ಭಾರತದಲ್ಲಿ ಎದ್ದ ದಂಗೆಗಳು ಬ್ರಿಟಿಷರ ಮೇಲೆ ಕ್ರಮೇಣ ಹೊರೆಯಾಗುತ್ತಾ ಬಂದವು. ಇನ್ನು ಹಿಡಿತ ಸಾಧಿಸುವುದು ಕಷ್ಟವೆನಿಸಿದಾಗ ಭಾರತಕ್ಕೆ ಸ್ವಾತಂತ್ರ್ಯ ನೀಡಲನುಸಾರವಾಗಿ 'ಕ್ರಿಪ್ಸ್ ಆಯೋಗ'ವು ಜನಿಸಿತು. ಈ ಆಯೋಗದ ಕಾರಣದಿಂದಾಗಿ ೧೯೪೬ರಲ್ಲಿ ಭಾರತೀಯ ಸಂವಿಧಾನ ಸಭೆಯು ಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿತು. ಈ ಸಭೆಯು ಒಟ್ಟು ೨ ವರ್ಷ ೧೧ ತಿಂಗಳು ೧೮ ದಿನಗಳ ದೀರ್ಘಾವಧಿಯಲ್ಲಿ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿತು. ಅಂತೆಯೇ ಆ ಕರಡನ್ನು ೨೬ ನವೆಂಬರ್, ೧೯೪೯ಕ್ಕೆ ಅಂಗೀಕರಿಸಿಕೊಳ್ಳಲಾಯಿತು (ಈ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ), ಕ್ರಮೇಣ ೨೬ ಜನವರಿ, ೧೯೫೦ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಯಿತು. ಅನೇಕ ರಾಷ್ಟ್ರಗಳ ಸಂವಿಧಾನಗಳನ್ನು ತಮ್ಮ ಮುಂದಿಟ್ಟುಕೊಂಡು ಅವುಗಳಲ್ಲಿನ ಉತ್ತಮ ಅಂಶಗಳನ್ನು ಆರಿಸಿತೆಗೆದು ನಮ್ಮಲ್ಲಿನ ಸ್ಥಿತಿಗನುಸಾರವಾಗಿ ಸೂಕ್ತ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಲಾಯಿತು. ಇನ್ನು ಸಂವಿಧಾನದ ಬೆನ್ನುಲುಬಾಗಿದ್ದ 'ಸಂವಿಧಾನದ ಶಿಲ್ಪಿ' ಎಂದೇ ಖ್ಯಾತರಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಇಲ್ಲಿ ಅಪಾರವಾದದ್ದು. ಅಲ್ಲದೆ ಸಂವಿಧಾನ ಸಭೆಯ ಇತರ ಸದಸ್ಯರಾದ ಡಾ. ರಾಜೇಂದ್ರ ಪ್ರಸಾದ್, ಸಚ್ಚಿದಾನಂದ ಸಿನ್ಹಾ, ಬಿ. ಎನ್. ರಾವ್, ಸರ್ದಾರ ವಲ್ಲಭಬಾಯಿ ಪಟೇಲ್, ಅಂತೆಯೇ ಒಟ್ಟೂ ೨೯೯ ಸದಸ್ಯರಿದ್ದು, ಅನೇಕ ಸಮಿತಿಗಳಾಗಿ ವಿಂಗಡಿಸಲ್ಪಟ್ಟಿದ್ದರು. 

ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತೀ ದೀರ್ಘವಾದ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರಂಭದಲ್ಲಿ ೨೨ ಭಾಗಗಳು, ೮ ಅನುಸೂಚಿಗಳು, ೩೯೫ ವಿಧಿಗಳಿದ್ದು, ಇಂದಿಗೆ ೨೫ ಭಾಗಗಳು, ೧೨ ಅನುಸೂಚಿಗಳು, ೪೪೮ಕ್ಕೂ ಹೆಚ್ಚು ವಿಧಿಗಳನ್ನು ಒಳಗೊಂಡಿದೆ. ಒಟ್ಟಾರೆ ದೇಶದಲ್ಲಿನ ನಾಗರಿಕರ ರಕ್ಷಣೆ ಹಾಗು ಮೂಲಭೂತ ಹಕ್ಕುಗಳನ್ನು ಗುರುತಿಸುವಲ್ಲಿ ಸಂವಿಧಾನವು ಪ್ರಮುಖವಾಗಿದೆ. ಸಮಾನತೆಯಿಂದ ಹಿಡಿದು ಅಸ್ಪೃಶ್ಯತೆಯ ತಡೆಯವರೆಗೆ, ಪ್ರಧಾನಿ, ರಾಷ್ಟ್ರಪತಿ, ಸರ್ವೋಚ್ಚ ನ್ಯಾಯಮೂರ್ತಿಗಳ ನೇಮಕ, ಸಂಸತ್ತು-ಸದನಗಳ ಸಂಖ್ಯೆ, ಅವುಗಳ ಕಾರ್ಯವೈಖರಿ, ಮೂಲಭೂತ ಹಕ್ಕುಗಳು, ಮುಲಭೂತ ಕರ್ತವ್ಯಗಳು ಇತ್ಯಾದಿ ವಿಷಯಗಳ ಭಂಡಾರವನ್ನೇ ಸಂವಿಧಾನವು ತನ್ನೊಳಗಿಟ್ಟುಕೊಂಡಿದೆ. ಬದಲಾಗುತ್ತಿರುವ ಜಗತ್ತಿನೊಂದಿಗೆ ಹೊಂದಿಕೊಳ್ಳಲು ಕಾಲಕ್ಕನುಸಾರವಾಗಿ ಸಂಸತ್ತಿನ ವಿಶೇಷ ಬಹುಮತದೊಂದಿಗೆ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಒಂದು ಜೀವಂತ ದಾಖಲೆ ಎನ್ನಬಹುದು.

ನಮ್ಮಲ್ಲಿ ಇಂದಿಗೆ ಪ್ರತಿಯೊಂದಕ್ಕೂ ಶಾಸನಗಳಿವೆ, ಕಾನೂನುಗಳಿವೆ. ಅವುಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಒಂದು ಸುಂದರ ಸುಸ್ಥಿರ ಸಮಾಜ ನಿರ್ಮಾಣವಾಗಲು ಸಾಧ್ಯ. ಸರ್ವರಿಗೂ ಮೂಲಭೂತ ಹಕ್ಕುಗಳನ್ನಂತೂ ಸಂವಿಧಾನ ಖಾತ್ರಿಪಡಿಸುತ್ತದೆ, ಅದರೊಂದಿಗೆ ಮೂಲಭೂತ ಕರ್ತವ್ಯಗಳ ಪಾಲನೆಯೆಡೆಗೆ ಪ್ರಜೆಗಳಾದ ನಾವು ಹೆಚ್ಚಿನ ಗಮನಹರಿಸಬೇಕು. ಆಗ ಭಾರತ ಪೂರ್ಣ ಪ್ರಮಾಣದಲ್ಲಿ ಗಣರಾಜ್ಯವಾಗುವುದು.

~ಪ್ರಾಪ್ತಿ ಆರ್. ನಾಯಕ

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni