ಪೌರಾಣಿಕ ಕಥಾಗುಚ್ಛ - ಜಗದೀಶಶರ್ಮಾ ಸಂಪ
ಪೌರಾಣಿಕ ಕಥಾಗುಚ್ಛ, ಭಾರತದ ೧೦ ಅಪ್ರಸಿದ್ಧ ಮಹಾಮಹಿಳೆಯರು - ಜಗದೀಶಶರ್ಮಾ ಸಂಪ
ಪುಸ್ತಕದ ಮುಖಪುಟವು ಮುಖ್ಯ ಆಕರ್ಷಣೆ! ಕೈಗೆತ್ತಿಕೊಂಡೆ. ಓದುತ್ತಿದ್ದಂತೆಯೇ ಪುಸ್ತಕದ ಪುಟಗಳು ಕೊನೆಗೊಂಡದ್ದು ತಿಳಿಯಲೇ ಇಲ್ಲ!
ಪುರಾಣದಲ್ಲಿ ಬರುವ ಅನೇಕ ಮಹಿಳೆಯರ ಕುರಿತಾದಂತ ಕಥೆಗಳನ್ನು ಸಾಮಾನ್ಯವಾಗಿ ಓದಿಯೇ ಇರುತ್ತೇವೆ. ಪಂಚಕನ್ಯೆಯರಾದ ಅಹಲ್ಯಾ, ಕುಂತಿ, ದ್ರೌಪದಿ, ಮಂಡೋದರಿ, ತಾರಾ ಹಾಗು ಪಂಚಸತಿಯರಾದ ಸೀತಾ, ಸತಿ, ಸಾವಿತ್ರಿ, ದಮಯಂತಿ, ಅರುಂಧತಿ ಇವರಲ್ಲಿ ಹೆಚ್ಚಿನವರ ಕಥೆಗಳನ್ನು ಕೇಳಿಯೇ ಇರುತ್ತೇವೆ. ಇವರ ಹೊರತಾಗಿ ಇತಿಹಾಸದ ಪುಟಗಳಲ್ಲಿ ಮೆಲ್ಲನೆ ಬಂದುಹೋದ ಮಹಿಳೆಯರೆಷ್ಟು? ಸಂಪರು ಇಲ್ಲಿ ಅಂತಹ ೧೦ ಮಹಿಳಾ ವ್ಯಕ್ತಿರೂಪಗಳ ಕಿರು ಪರಿಚಯ ಮಾಡಿದ್ದಾರೆ ಎನ್ನಬಹುದು.
ವಸುಗಳ ಶಾಪದಿಂದ ತನ್ನ ಪತಿಯನ್ನು ಪಾರುಮಾಡಿದ ಉಲೂಪಿಯ ಚಾಣಕ್ಷತೆ, ರಾವಣನ ಬಂಧನದಲ್ಲಿದ್ದ ಸೀತೆಯ ಜೊತೆಗಿದ್ದ ತ್ರಿಜಟೆಯ ಮಮಕಾರ, ಹನುಮಂತನನ್ನು ಮೊದಲಿಗೆ ತಡೆದು ನಂತರ ಬರಮಾಡಿಕೊಂಡ ಲಂಕೆ, ವೇಶ್ಯೆಯಾಗಿದ್ದು ಒಮ್ಮೆಲೇ ಆಂತರ್ಯದ ಚಿಲುಮೆಯ ಮಾನವರಿಕೆಯಾಗಿ ಸಚ್ಚಾರಿತ್ರ್ಯಳಾದ ಪಿಂಗಲೆ, ಅರಸನಾಗಿದ್ದು ಇಂದ್ರನಿಂದಾಗಿ ಹೆಣ್ಣಾದ ಭಂಗಾಶ್ವನನ ಸ್ತ್ರೀ ಜನ್ಮದ ಸಾರ್ಥಕತೆ, ಮಾತಿಗೆ ತಕ್ಕಂತೆ ನಡೆಯಲು ತನ್ನನ್ನೇ ತಾನು ಸುಟ್ಟಿಕೊಳ್ಳಲೂ ಸಿದ್ಧ ಎಂಬ ಸ್ರುಚಾವತಿಯ ಧೀರ ನಿಲುವು, ಕಠಿಣ ಪರೀಕ್ಷೆಯಲ್ಲೂ ತನ್ನ ಪಾತಿವೃತ್ಯ ಮರೆಯದ ಸುಕನ್ಯೆ, ತನ್ನ ವೀರೋಕ್ತಿಗಳ ಮೂಲಕ ಸೋಲುವುದಕ್ಕಿಂತ ಸಾವು ಲೇಸು ಎಂದು ತನ್ನ ಮಗನನ್ನು ಹುರಿದುಂಬಿಸುವ ವಿದುಲಾ, ತಪೋಬಲದ ಸಾಕಾರಮೂರ್ತಿಯಾದ ಶಾಂಡಿಲಿ, ರಾಜನಿಗೆ ಆತನ ಮರೆವನ್ನೇ ಮರೆಸುವಂತ ನುಡಿಗಳನ್ನು ಕಿವಿಗಿಟ್ಟ ಶಕುಂತಲೆ ಹೇಗೆ ಸಂಪರು ಕುರುಹೇ ಇಲ್ಲದಂತಾಗಿಹೋದ ಹಲವು ಮಹಿಳೆಯರನ್ನು ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ.
ಕಿರುಪರಿಚಯ ಮರುಪರಿಚಯವಾದಂತಿತ್ತು ಎನ್ನಬಹುದು!
.
.
.
.
.
.
.
.
Read for life!
Comments
Post a Comment